ಆಜಾದ್ ಮಾಡೆಲ್ ಶಾಲೆಗೆ ಕೊಠಡಿ ಕೊರತೆ- ಶಾಲಾ ಮೈದಾನದಲ್ಲೇ ಮಕ್ಕಳಿಗೆ ಪಾಠ

ಹರಿಹರ, ಡಿ.27- ನಗರದ ಮೌಲಾನಾ ಆಜಾದ್ ಮಾಡೆಲ್ ಸ್ಕೂಲ್‌ನ ಮಕ್ಕಳಿಗೆ ಕೊಠಡಿ ದುರಸ್ತಿ ಆಗದ ಕಾರಣ ನಗರದ ಡಿಆರ್‌ಎಂ‌ ಶಾಲೆ ಮೈದಾನದಲ್ಲಿ ಮಕ್ಕಳಿಗೆ ಪಾಠವನ್ನು ಮಾಡಲಾಗುತ್ತಿದೆ.

ಅಲ್ಪಸಂಖ್ಯಾತ ಇಲಾಖೆಯ ಅಡಿಯಲ್ಲಿ ಬರುವ ಇಲ್ಲಿನ ಮೌಲಾನಾ ಆಜಾದ್‌ ಮಾಡೆಲ್ ಶಾಲೆಯಲ್ಲಿ ಸುಮಾರು 283 ವಿದ್ಯಾರ್ಥಿಗಳು ವಿದ್ಯಾಭ್ಯಾಸ  ಮಾಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗ ಳಿಗೆ ಶಿಥಿಲವಾದ ಕಟ್ಟಡದಲ್ಲಿ ಪಾಠ ಮಾಡಲಾಗು ತ್ತಿದೆ. ಮಕ್ಕಳಿಗೆ ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ದಿನ ನಿತ್ಯವೂ ಭಯದ ವಾತಾವರಣದಲ್ಲಿ ಕಲಿಯುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಶೌಚಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ 500 ಮೀಟರ್ ದೂರದಲ್ಲಿರುವ ಇನ್ನೊಂದು ಸರ್ಕಾರಿ ಶಾಲೆಗೆ ಹೋಗಬೇಕಾಗಿದೆ ಮತ್ತು ಮಕ್ಕಳಿಗೆ ಶುದ್ಧ ನೀರೂ ಸಹ ಇರುವುದಿಲ್ಲ ಮತ್ತು ಆಟದ ಮೈದಾನ ಇರುವುದಿಲ್ಲ. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಮಕ್ಕಳಿಗೆ ಬೇಕಾಗುವ ವ್ಯವಸ್ಥೆ ಕಲ್ಪಿಸುವುದಕ್ಕೆ ಆದ್ಯತೆ ಕೊಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕ ರಾಜಶೇಖರ್‌ ಪಾಟೀಲ್ ಮಾತನಾಡಿ, ನಮ್ಮ ಶಾಲೆಯಲ್ಲಿ 6ನೇ ತರಗತಿಯಿಂದ 10 ನೇ ತರಗತಿಗಳು ನಡೆಯುತ್ತಿವೆ. ಕೊಠಡಿಗಳ ಕೊರತೆ ಇರುವುದ ರಿಂದ ಬೆಳಗ್ಗೆ 9-10 ನೇ ತರಗತಿ ಮಕ್ಕಳಿಗೆ ಪಾಠವನ್ನು ಮಾಡಿದರೆ, ಮಧ್ಯಾಹ್ನ 6 – 7 – 8ನೇ ತರಗತಿ ಮಕ್ಕಳಿಗೆ ಪಾಠವನ್ನು ಹೇಳಿಕೊಡಲಾ ಗುತ್ತದೆ. ಮಕ್ಕಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಶಾಸಕ ಎಸ್. ರಾಮಪ್ಪ ಮತ್ತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಗಮನಕ್ಕೂ ಸಹ ತರಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಇರ್ಫಾನ್, ಆಸಿಯಾ, ಜಾವೇದ್, ಜಿಯಾವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!