ದಾವಣಗೆರೆ, ಡಿ. 27 – ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾಕೂಟಕ್ಕೆ ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಅಂತರರಾಷ್ಟ್ರೀಯ ಕುಸ್ತಿ ಪಟು ಅರ್ಜುನ್ ಹಲಕುರ್ಕಿ ಅವರು ಸೋಮವಾರ ಚಾಲನೆ ನೀಡಿದ್ದಾರೆ. ಮೂರು ದಿನಗಳ ಕಾಲ ಕ್ರೀಡಾಕೂಟ ನೆರವೇರಲಿದೆ.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಡಿಎಆರ್, ನಗರ, ಗ್ರಾಮಾಂತರ ಮತ್ತು ಚನ್ನಗಿರಿ ಉಪ ವಿಭಾಗ, ವಿಶೇಷ ಘಟಕ, ಮಹಿಳಾ ತಂಡ ಹಾಗೂ ಪೊಲೀಸ್ ವಾದ್ಯವೃಂದದ ತಂಡಗಳು ಭಾಗವಹಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ್ ಹಲಕುರ್ಕಿ, ಕ್ರೀಡಾಪಟುಗಳು ಪಥ್ಯದ ಬಗ್ಗೆ ಕಾಳಜಿ ವಹಿಸಬೇಕು. ಇದರಿಂದ ದೇಹಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದು. ಒಂದು ಬಾರಿ ಅನಾರೋಗ್ಯಕ್ಕೆ ಸಿಲುಕಿದರೆ, ಅದರಿಂದ ಚೇತರಿಸಿಕೊಂಡು ಕ್ರೀಡೆಯಲ್ಲಿ ಸಾಧನೆ ಮಾಡುವುದು ಕಷ್ಟವಾಗುತ್ತದೆ ಎಂದು ಕಿವಿಮಾತು ಹೇಳಿದರು.
ದಾವಣಗೆರೆಯಲ್ಲಿ ಹತ್ತು ವರ್ಷ ಕಾಲ ಕ್ರೀಡಾ ಹಾಸ್ಟೆಲ್ನಲ್ಲಿದ್ದು ಕುಸ್ತಿ ತರಬೇತಿ ಪಡೆದ ದಿನಗಳನ್ನು ನೆನಪಿಸಿಕೊಂಡ ಅವರು, ನಗರದಲ್ಲಿದ್ದಾಗ ನನಗೆ ನಿರಂತರವಾಗಿ ಪ್ರೋತ್ಸಾಹ ದೊರೆತಿತ್ತು. ಮುಂದಿನ 2024ರ ಪ್ಯಾರಿಸ್ ಒಲಂಪಿಕ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಸಾಧನೆ ಮಾಡುವ ಗುರಿ ಇದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಪ್ರತಿ ವರ್ಷ ಜಿಲ್ಲಾ ಹಂತದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಈ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದವರು ರಾಷ್ಟ್ರ ಮಟ್ಟದವರೆಗೆ ಬೆಳೆಯಲು ಅವಕಾಶ ಇದೆ. ಪೊಲೀಸರಲ್ಲಿ ಕ್ರೀಡಾ ಸ್ಪೂರ್ತಿ ಬೆಳೆಸುವುದು ಹಾಗೂ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಕ್ರೀಡಾಕೂಟದ ಉದ್ದೇಶವಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಅರ್ಜುನ್ ಹಲಕುರ್ಕಿ ಅವರು ಸೈನ್ಯದಲ್ಲಿ ಹವಾಲ್ದಾರ್ ಆಗಿದ್ದರು. ಅವರು ಅಂತರರಾಷ್ಟ್ರೀಯ ಸಾಧನೆ ಮಾಡಿರುವುದಲ್ಲದೇ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ. ಅವರು ಉಳಿದ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.
ಈ ಪಂದ್ಯಾವಳಿಯಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು ಇರುತ್ತವೆ. ಉತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಎಸ್ಪಿ ಎಂ. ರಾಜೀವ್ ಉಪಸ್ಥಿತರಿದ್ದರು.
ಕೆ.ಎಸ್. ಶೈಲಜ ಹಾಗೂ ದೇವರಾಜ ಸಂಗೇನಹಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು.