ವಿದ್ಯಾರ್ಥಿಗಳಲ್ಲಿ ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಇನಾಯತ್ ಕಳಕಳಿ
ದಾವಣಗೆರೆ, ಡಿ.26- ಪ್ರೀತಿ, ಪ್ರೇಮದ ಗುಂಗು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಇನಾಯತ್ ಉಲ್ಲಾ ಟಿ. ಹೇಳಿದರು.
ನಗರದ ಅಂಜುಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಲ್ಲಿ ಚಿತ್ತ ಓದಿನತ್ತ ಮಾತ್ರ ಇರಬೇಕು. ಏಕಚಿತ್ತದಿಂದ ಶ್ರಮವಹಿಸುವ ವಿದ್ಯಾರ್ಥಿಗಳು ಸಹಜವಾಗಿ ಉತ್ತಮ ಸಾಧನೆ ಮಾಡುತ್ತಾರೆಂದರು.
ಯುವ ಮನಸ್ಸುಗಳು ಪರಸ್ಪರ ಆಕರ್ಷಿತವಾಗುವುದು ಸಹಜ. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಇಷ್ಟವಾದರೆ ಶಿಕ್ಷಣ ಪೂರ್ಣಗೊಳಿಸಿ, ಉತ್ತಮ ಉದ್ಯೋಗ ಅಥವಾ ವ್ಯಾಪಾರ, ಉದ್ಯಮ ಸ್ಥಾಪಿಸುವವರೆಗೂ ಕಾಯಬೇಕು. ನಂತರ ಪರಸ್ಪರರು ಜೀವನ ಸಂಗಾತಿ ಆಗುವ ಬಗ್ಗೆ ನಿರ್ಣಯಿಸಬೇಕು ಎಂದು ಅವರು ಹಿತ ನುಡಿದರು.
ವಿದ್ಯಾರ್ಥಿ ಹಂತದಲ್ಲೇ ಪ್ರೀತಿಯ ಬಲೆಗೆ ಬಿದ್ದವರು ಬಹುತೇಕ ಶೈಕ್ಷಣಿಕವಾಗಿ ಹಿನ್ನಡೆಯನ್ನು ಅನುಭವಿಸುತ್ತಾರೆ. ನಂತರ ಅವರು ಬದುಕಿನಲ್ಲೂ ಹಿನ್ನಡೆಯಾಗಿ ಸಂಕಷ್ಟಕ್ಕೀಡಾಗುತ್ತಾರೆ. ಪ್ರೀತಿ ಮಾಡುವುದು ತಪ್ಪಲ್ಲ. ಆದರೆ, ವಿದ್ಯಾರ್ಥಿ ಹಂತ ಅದಕ್ಕೆ ಸೂಕ್ತವಲ್ಲ ಎಂದು ಸಲಹೆ ನೀಡಿದರು.
ಪದವಿ ಶಿಕ್ಷಣ ಸಾಕೆಂಬ ಭಾವನೆ ಬೇಡ. ತೋಳಹುಣಸೆಯಲ್ಲಿ ಸುಸಜ್ಜಿತ ವಿವಿ ಇದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉತ್ತಮ ಹಾಸ್ಟೆಲ್, ಕಟ್ಟಡ, ಪೀಠೋಪಕರಣ, ಬೋಧಕ ವ್ಯವಸ್ಥೆ ಇದೆ. ಪದವಿ ಶಿಕ್ಷಣದ ನಂತರ ಎಲ್ಲರೂ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬೇಕೆಂದರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್. ರಿಯಾಜ್ ಅಹ್ಮದ್ ಮಾತನಾಡಿ, ಮದುವೆ, ಬಡತನವೆಂದು ಯಾರೂ ಕೂಡ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದೆಂದು ಕಿವಿ ಮಾತು ಹೇಳಿದರು.
ಪ್ರಭಾರ ಪ್ರಾಚಾರ್ಯ ಎನ್.ಎ. ಲತೀಫ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಹೆಚ್.ಜೆ. ಮೊಹಮ್ಮದ್ ಉಮರ್, ಶೈಕ್ಷಣಿಕ ಸಲಹೆಗಾರ ಕೆ. ಜಾವೀದ್ ಅಹ್ಮದ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ. ಕರೀಂ ಉಲ್ಲಾ, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಎಸ್. ಮೀರಾಂಬಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಅಫ್ರೋಜ್ ಖಾನ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.