ದಾವಣಗೆರೆ, ಡಿ. 27 – ನಟ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪತ್ನಿ-ಮಕ್ಕಳಿಗೂ ಗೊತ್ತಾಗದ ರೀತಿಯಲ್ಲಿ ದಾನ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಅವರ ಜೀವನದ ಆದರ್ಶಗಳನ್ನು ಜನರು ಮೈಗೂಡಿಸಿಕೊಳ್ಳಬೇಕೆಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ಅಖಿಲ ಕರ್ನಾಟಕ ಸರ್ವಜ್ಞ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ಹಿಂದುಳಿದ ಕುಂಬಾರರ ಸಂಘದ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರತ್ನ ದಿ. ಪುನೀತ್ ರಾಜ್‌ಕುಮಾರ್ ನುಡಿ ನಮನ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಪುನೀತ್ ಬದುಕಿದ್ದು 46 ವರ್ಷಗಳೇ ಆದರೂ, ಸಾವಿರಾರು ಜನರಿಗೆ ನೆರವಾಗಿದ್ದಾರೆ. ದಾನಶೂರ ಕರ್ಣನ ರೀತಿಯಲ್ಲಿ ಅವರು ಬಲಗೈಯಲ್ಲಿ ದಾನ ಮಾಡಿದ್ದು ಎಡಗೈಗೆ ಗೊತ್ತಾಗದಂತೆ ನೋಡಿಕೊಂಡಿದ್ದಾರೆ. ಅಂಥವರಿಗೆ ಸಾವಿಲ್ಲ. ದೇಹಕ್ಕೆ ಮಾತ್ರ ಸಾವಾಗಿದ್ದು, ಪುನೀತ್ ಅಜರಾಮರ ಎಂದು ಸ್ವಾಮೀಜಿ ಹೇಳಿದರು.
ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸ್ವಯಂ ಪ್ರೇರಿತವಾಗಿ ಅಂತ್ಯಕ್ರಿಯೆಗೆ ಬಂದಿದ್ದು ಇದೇ ಮೊದಲು.
ಪುನೀತ್ ಅವರ ಬದುಕಿನಂತೆ ನಾವು ಒಂದಿಷ್ಟು ಒಳ್ಳೆಯ ಕಾರ್ಯ ಮಾಡುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಕಣ್ಣುದಾನ, ಅಂಗದಾನ, ರಕ್ತದಾನದಂತಹ ಕಾರ್ಯಗಳಿಗೆ ಮುಂದಾಗಬೇಕು ಎಂದು ವಚನಾನಂದ ಶ್ರೀಗಳು ಕರೆ ನೀಡಿದರು.
ಶಾಸಕ ಹಾಗೂ ಲಿಡ್ಕರ್ ಅಧ್ಯಕ್ಷ ಪ್ರೊ. ಲಿಂಗಣ್ಣ ಮಾತನಾಡಿ, ನಟನೆ ಹಾಗೂ ಸೇವೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರು ಹೆಸರು ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅವರ ಅಗಲಿಕೆ ನಾಡಿನ ಜನರಿಗೆ ದುಃಖ ತಂದಿದೆ. ಅವರ ಗೌರವಕ್ಕಾಗಿ ಕಣ್ಣು, ರಕ್ತದಾನ, ದೇಹ ದಾನದಂತಹ ಕಾರ್ಯಗಳನ್ನು ಆಯೋಜಿಸಿರುವುದು ಸ್ವಾಗತಾರ್ಹ ಎಂದರು.
ಚಿತ್ರದುರ್ಗದ ಬಳ್ಳೇಕಟ್ಟೆಯ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ರಕ್ತದಾನ, ನೇತ್ರದಾನ ಶಿಬಿರ ಗಳನ್ನು ಆಯೋಜಿಸಲಾಗಿತ್ತು.
ವೇದಿಕೆಯ ಮೇಲೆ ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಸಿದ್ದಗಂಗಾ ಪಿ.ಯು. ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್, ಅಖಿಲ ಕರ್ನಾಟಕ ಸರ್ವಜ್ಞ ಸಾಂಸ್ಕೃತಿಕ ಕಲಾವೇದಿಕೆ ರಾಜ್ಯಾಧ್ಯಕ್ಷ ಕೆ.ವೈ. ತಿಪ್ಪೇಸ್ವಾಮಿ, ಜಿಲ್ಲಾ ಹಿಂದುಳಿದ ಕುಂಬಾರ ಸಂಘದ ಗೌರವಾಧ್ಯಕ್ಷ ಕೆ.ಎಸ್. ಜಯ್ಯಪ್ಪ, ಜಿಲ್ಲಾ ಹಿಂದುಳಿದ ಕುಂಬಾರ ಸಂಘದ ಅಧ್ಯಕ್ಷ ಕೆ.ಎನ್. ಬಸವರಾಜ್, ಮುಖಂಡರಾದ ಹಿರಿಯಮ್ಮ ಮಂಜಪ್ಪ, ನಾಗಮ್ಮ ಮತ್ತಿತರರು ಉಪಸ್ಥಿತರಿದ್ದರು.