ದಾವಣಗೆರೆ ವಿವಿ ಅಂತರ ಕಾಲೇಜು ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಉದ್ಘಾಟನೆಯಲ್ಲಿ ಡಾ. ಎಂ.ಜಿ. ಈಶ್ವರಪ್ಪ ಆಶಯ
ದಾವಣಗೆರೆ, ಡಿ.24- ಸದೃಡ ರಾಷ್ಟ್ರ ನಿರ್ಮಾಣಕ್ಕೆ ದೈಹಿಕ – ಬೌದ್ಧಿಕ ಸದೃಢತೆಯುಳ್ಳ ಯುವ ಜನಾಂಗ ಬೇಕಾಗಿದೆ. ಆ ಸದೃಢತೆಯನ್ನು ಕ್ರೀಡಾ ಚಟುವಟಿಕೆಗಳ ಮುಖೇನ ಪಡೆಯಬಹುದು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧರಾಮ ವಿಜ್ಞಾನ ಕಾಲೇಜು, ದಾವಣಗೆರೆ ವಿಶ್ವವಿದ್ಯಾನಿಲಯಗಳ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ದಾವಣಗೆರೆ ವಿವಿ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಬ್ಯಾಸ್ಕೆಟ್ ಬಾಲ್ ಪಂದ್ಯ ಹಾಗೂ ಆಯ್ಕೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನಸ್ಸಿನಂತೆ ದೇಹವೂ ಸದೃಢವಾಗಿರಲು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅಲ್ಲದೇ ಅದು ನಿಮ್ಮ ಭವಿಷ್ಯದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಲಿದೆ. ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಸಹ ಉತ್ತಮವಾಗಿದ್ದರೆ ಕಾಲೇಜು ಸಾರ್ಥಕತೆ ಪಡೆಯಲಿದೆ ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೆ. ವೆಂಕಟೇಶ್ ಮಾತನಾಡಿ, ಕ್ರೀಡಾಪಟುಗಳಿಗೆ ಪ್ರತಿ ಹಂತದಲ್ಲೂ ಸಾಕಷ್ಟು ಗೌರವವಿದೆ. ತಾಳ್ಮೆ (ಟಾಲರೆನ್ಸ್), ಕೌಶಲ್ಯ (ಸ್ಕಿಲ್) ಇವುಗಳನ್ನೊಳಗೊಂಡಿರುವುದೇ ಕ್ರೀಡೆ. ಈ ಅಂಶಗಳನ್ನು ಕೇವಲ ಕ್ರೀಡೆಗಷ್ಟೇ ಅಲ್ಲದೇ, ನಿಮ್ಮ ಜೀವನದಲ್ಲೂ ಅಳವಡಿಸಿಕೊಂಡರೆ ಯಶಸ್ಸು ಕಾಣಬಹುದು ಎಂದು ಸ್ಪೋರ್ಟ್ಸ್ ಎಂಬುದರ ಪ್ರತಿ ಅಕ್ಷರದ ಒಳಾರ್ಥವನ್ನು ಕ್ರೀಡಾಪಟುಗಳಿಗೆ ಮನವರಿಕೆ ಮಾಡಿದರು.
ಧರಾಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ವನಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಮಕ್ಕಳಿಗೆ ಹೊರಾಂಗಣ ಕ್ರೀಡೆಗಳ ಬದಲಿಗೆ ಮೊಬೈಲ್, ಕಂಪ್ಯೂಟರ್‌ಗಳಲ್ಲಿನ ಆಟವೇ ಹೆಚ್ಚಾಗಿದೆ. ಹೀಗಾದರೆ ದೈಹಿಕ ಮತ್ತು ಮಾನಸಿಕ ಸದೃಢತೆ ಕಾಣಲು ಹೇಗೆ ಸಾಧ್ಯ. ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಂಡರೆ ಶೈಕ್ಷಣಿಕವಾಗಿ ಅಂಕ ಗಳಿಸಲು ಸಾಧ್ಯವಿಲ್ಲ ಎಂಬ ತಪ್ಪು ತಿಳುವಳಿಕೆ ಪೋಷಕರಲ್ಲಿದೆ. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕ್ರೀಡೆ ಅತ್ಯಗತ್ಯ ಎಂದರು.
ಧರಾಮ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಆರ್. ಗೋಪಾಲಕೃಷ್ಣ ನಾಯ್ಕ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ತನ್ಮಯಿ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಎಸ್.ಆರ್. ಕುಮಾರ್ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಶಿವಪ್ಪ ಮಳ್ಳೂರ್ ನಿರೂಪಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ. ವಸಂತನಾಯ್ಕ್ ವಂದಿಸಿದರು.