ಗ್ರಾಹಕರು ಜಾಗೃತರಾದಾಗ ಮಾತ್ರ ಶೋಷಣೆ ತಪ್ಪಿಸಲು ಸಾಧ್ಯ

ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಗೋಖಲೆ ಘಾಳಪ್ಪ 

ದಾವಣಗೆರೆ, ಡಿ.24- ಗ್ರಾಹಕರು ಜಾಗೃತಗೊಂಡಾಗ ಮಾತ್ರ ತಮಗಾಗುವ ಅನ್ಯಾಯ, ವಂಚನೆ, ಶೋಷಣೆಯಿಂದ ಹೊರಬರಲು ಸಾಧ್ಯ  ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಗೋಖಲೆ ಘಾಳಪ್ಪ ಹೇಳಿದರು. 

ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜನತಾ ಬಜಾರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ತಾವು ಕೊಳ್ಳುವ ವಸ್ತುಗಳ ಬೆಲೆ, ಗುಣಮಟ್ಟ, ಪ್ರಮಾಣ, ಪ್ರಮುಖ ಅಂಶಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿ ಸುವ ಅಗತ್ಯವಿದೆ. ಜೊತೆಗೆ ಖರೀದಿಸಿದ್ದಕ್ಕೆ ಪ್ರತಿಯಾಗಿ ಅಧಿಕೃತ ರಸೀದಿ ಪಡೆಯುವು ದನ್ನು ಯಾರೂ ಮರೆಯಬಾರದು ಎಂದರು.

ವಿವಿಧ ವ್ಯವಹಾರಗಳಲ್ಲಿ ವಂಚನೆ, ಅನ್ಯಾಯ, ಮೋಸಕ್ಕೆ ಒಳಗಾಗುವ ಗ್ರಾಹಕರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡುವ ಮೂಲಕ ತ್ವರಿತಗತಿಯಲ್ಲಿ ಪರಿಹಾರ ಪಡೆದುಕೊಳ್ಳ ಬಹುದಾಗಿದೆ ಎಂದು ಮಾಹಿತಿ ನೀಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಈ ರೀತಿ ದೂರು ಸಲ್ಲಿಕೆಯಾಗುವುದೇ ವಿರಳವಾಗಿದೆ. ಇದಕ್ಕೆ ಗ್ರಾಹಕರ ತಾತ್ಸಾರ ಮನೋಭಾವನೆ ಕಾರಣ ಎಂದು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಜ್ಯೋತಿ ರಾಧೇಶ್ ಜಂಬಿಗಿ ಮಾತನಾಡಿ, ಗ್ರಾಹಕರ ರಕ್ಷಣಾ ಕಾಯಿದೆಗೆ 2019 ರಲ್ಲಿ ತಿದ್ದುಪಡಿ ತರುವ ಮೂಲಕ ಗ್ರಾಹಕರಿಗೆ ಇನ್ನಷ್ಟು ರಕ್ಷಣೆ ಹಾಗೂ ಹಕ್ಕು ದೊರೆತಂತಾಗಿದೆ. ಮೊದಲಿದ್ದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಇದೀಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವಾಗಿ ಬದಲಾಗಿದೆ ಎಂದರು.

ಜಿಲ್ಲಾ ವ್ಯಾಪ್ತಿಯಲ್ಲಿ 20 ಸಾವಿರ ರೂ. ಪರಿಹಾರದ ಮಿತಿಯನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. 5 ಲಕ್ಷ ರೂ.ಗಳವರೆಗಿನ ಖರೀದಿ, ಸೇವಾ ನ್ಯೂನತೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು ಯಾವುದೇ ಶುಲ್ಕವಿರು ವುದಿಲ್ಲ, 5 ಲಕ್ಷದಿಂದ 10 ಲಕ್ಷದವರೆಗೆ 200 ರೂ. ಶುಲ್ಕ, 10 ಲಕ್ಷದಿಂದ 20 ಲಕ್ಷದವರೆಗೆ 400 ರೂ., 20 ಲಕ್ಷದಿಂದ 50 ಲಕ್ಷ ರೂ.ಗಳವರೆಗೆ 1000 ರೂ., 50 ಲಕ್ಷದಿಂದ 1 ಕೋಟಿ ರೂಗಳವರೆಗೆ 2000 ರೂ. ಶುಲ್ಕ ವಿಧಿಸಲಾಗುವುದು ಎಂದು ವಿವರ ನೀಡಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಹೆಚ್.ಎಸ್. ರಾಜು ಗ್ರಾಹಕರಿಗೆ ಉಪಯುಕ್ತ ಮಾಹಿತಿ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ನಿವೃತ್ತ ವ್ಯವಸ್ಥಾಪಕ ಪಿ. ಅಂಜಿನಪ್ಪ ಉಪನ್ಯಾಸ ನೀಡಿದರು.

ಜಿಲ್ಲಾ  ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷೆ ಹೆಚ್. ಅನಿತಾ ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕ ಬಿ.ಟಿ. ಪ್ರಕಾಶ್ ಪ್ರಾರ್ಥಿಸಿ, ನಿರೂಪಿಸಿದರು, ಜಂಟಿ ನಿರ್ದೇಶಕರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!