ಪುರಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಸಚಿವ ಭೈರತಿ ಬಸವರಾಜ್ ಭರವಸೆ
ಮಲೇಬೆನ್ನೂರು, ಡಿ.24- ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ಧಿ ಜೊತೆಗೆ ಮಲೇಬೆನ್ನೂರು ಪುರಸಭೆಗೆ ಕಾಯಕಲ್ಪ ಕೊಡುವ ಜವಾಬ್ದಾರಿ ನನ್ನದು ಎಂದು ನಗರಾಭಿ ವೃದ್ಧಿ ಸಚಿವರೂ ಆದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಅವರು ಶುಕ್ರವಾರ ಸಂಜೆ ಪಟ್ಟಣದ ಮುಖ್ಯ ವೃತ್ತದಲ್ಲಿ ಹಮ್ಮಿ ಕೊಂಡಿದ್ದ ಮಲೇಬೆನ್ನೂರು ಪುರಸಭೆಯ ಚುನಾ ವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು. ಇಲ್ಲಿನ ಪುರಸಭೆ ಯನ್ನು ಅತ್ಯಾಧು ನಿಕ ಗೊಳಿಸುವ ಮೂಲಕ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಭರವಸೆ ನೀಡಿದ ಭೈರತಿ ಬಸವರಾಜ್ ಅವರು ರಾಜ್ಯದ ನಗರ, ಪಟ್ಟಣಗಳ ಅಭಿವೃದ್ಧಿಗಾಗಿ 5140 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದರು.
ನಾನು, ಮುನ್ನಿರತ್ನ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಜನಸೇವೆ ಆರಂಭಿಸಿ ಈಗ ಸಚಿವರಾಗಿ ನಿಮ್ಮ ಮುಂದೆ ಇದ್ದೇವೆ. ಜನನಾಯಕರಾಗಿ ಬೆಳೆಯಲು ಸ್ಥಳೀಯ ಸಂಸ್ಥೆಗಳು ಬಹಳ ಮುಖ್ಯವಾಗಿವೆ. ಮಲೇಬೆನ್ನೂರು ಪುರಸಭೆಗೆ ಸ್ಪರ್ಧಿಸಿರುವ ಬಿಜೆಪಿಯ ಎಲ್ಲಾ 14 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಮುನ್ನುಡಿ ಬರೆಯಿರಿ ಎಂದು ಜನತೆಯಲ್ಲಿ ಸಚಿವ ಭೈರತಿ ಬಸವರಾಜ್ ಮನವಿ ಮಾಡಿದರು.
ತೋಟಗಾರಿಕೆ ಸಚಿವ ಮುನಿರತ್ನ ಮಾತನಾಡಿ ದೇಶ, ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಎಷ್ಟು ಮುಖ್ಯವೋ ಮಲೇಬೆನ್ನೂರು ಅಭಿವೃದ್ಧಿಗೆ ಬಿಜೆಪಿ ಅಷ್ಟೇ ಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಂಸದ ಸಿದ್ದೇಶ್ವರ, ಸಚಿವ ಭೈರತಿ ಬಸವರಾಜ್, ಮಾಜಿ ಶಾಸಕ ಬಿ.ಪಿ. ಹರೀಶ್ ಅವರ ಕೈ ಬಲಪಡಿಸಬೇಕೆಂದು ಕೋರಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಇಲ್ಲಿನ ಪುರಸಭೆಗೆ 14 ಮತ್ತು 15ನೇ ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರದಿಂದ 5 ಕೋಟಿ ರೂ ಅನುದಾನ ಬಂದಿದೆ. ಹರೀಶ್ ಅವರು ಶಾಸಕರಾಗಿದ್ದಾಗ ಮಲೇಬೆನ್ನೂರು ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿ ಎರಡೂವರೆ ಕೋಟಿ ರೂ ವಿಶೇಷ ಅನುದಾನ ತಂದು ಕಾಂಕ್ರೀಟ್ ರಸ್ತೆ, ಚರಂಡಿಗಳನ್ನು ಮಾಡಿದ್ದು ಬಿಟ್ಟರೇ ಇದುವರೆಗೂ ಯಾವ ಶಾಸಕರೂ ವಿಶೇಷ ಅನುದಾನ ತಂದಿಲ್ಲ, ಮಲೇಬೆನ್ನೂರು ಬಿಜೆಪಿಯನ್ನು ಸ್ವತಂತ್ರವಾಗು ಅಧಿಕಾರಕ್ಕೆ ತಂದರೆ ಮತ್ತೆ ವಿಶೇಷ ಅನುದಾನವನ್ನು ಕೊಡಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ ಸಿದ್ದೇಶ್ವರ, ಮಲೇಬೆನ್ನೂರು ಪುರಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದು, ಅದಕ್ಕೆ ಅವಕಾಶ ಕೊಡಬೇಡಿ. ಮುಸ್ಲಿಂ ಬಾಂಧವರೂ ಸೇರಿದಂತೆ ಎಲ್ಲ ಜನರ ಮನವೊಲಿಸಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಶಾಸಕ ಬಿ.ಪಿ ಹರೀಶ್ ಮಾತನಾಡಿ, ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಮಾಜಿ ಶಾಸಕ ಶಿವಶಂಕರ್ ಎಲ್ಲಾ ನಾನೇ ಮಾಡಿದ್ದು ಎಂದು ಸುಳ್ಳು ಹೇಳುತ್ತಾ ಹೊರಟಿರುವುದು ಅವರ ಹತಾಶೆಯನ್ನು ಎತ್ತಿ ತೋರಿಸುತ್ತದೆ. ಶಾಸಕ ರಾಮಪ್ಪ ಹೇಳಿರುವಂತೆ ಕೊರೊನಾ ಕಾರಣದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗಿಲ್ಲ ಎನ್ನುವುದು ಸತ್ಯ. ಅಭಿವೃದ್ಧಿ ದೃಷ್ಟಿಯಿಂದ ಮಲೇಬೆನ್ನೂರು ಪುರಸಭೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಪ್ರಾರ್ಥಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವ ಚುನಾವಣೆ ಇದಾಗಿದ್ದು , ಸದಾ ನಿಮ್ಮೊಂದಿಗೆ ಬೆರೆಯುವ ಕಾರ್ಯಕರ್ತರನ್ನೇ ಅಭ್ಯರ್ಥಿಗಳನ್ನಾಗಿ ಮಾಡಿದ್ದೇವೆ. ಇವರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಇನ್ನಷ್ಟು ಶಕ್ತಿ ನೀಡಬೇಕು, ಬೆಳಗಾವಿ ಅಧಿವೇಶನದಲ್ಲಿ ರೈತರ ಬೆಳೆಹಾನಿ ಪರಿಹಾರವನ್ನು ಹೆಕ್ಟರ್‌ಗೆ 25 ಸಾವಿರ ರೂಗಳಿಗೆ ಹೆಚ್ಚಿಸುವ ಮೂಲಕ ಬಿಜೆಪಿ ಸರ್ಕಾರ ರೈತರ ಪರವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ವೀರೇಶ್ ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಬಾರಿ 7 ಜನ ಬಿಜೆಪಿ ಸದಸ್ಯರಾಗಿದ್ದರು, ಈ ಬಾರಿ 12 ಜನ ಸದಸ್ಯರನ್ನಾಗಿ ಆಯ್ಕೆ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ ಎಂದರು.
ಹರಿಹರ ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಬಿಜೆಪಿ ಮುಖಂಡ ಚಂದ್ರಶೇಖರ್ , ಮಾಜಿ ಮೇಯರ್ ಅಜಯ್ ಕುಮಾರ್, ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿ ಬಿ.ಎಸ್. ಜಗದೀಶ್, ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಮಂಜಾನಾಯ್ಕ್, ಅರಕೆರೆ ಹನುಮಂತಪ್ಪ, ಮುಖಂಡರಾದ ಕೆ.ಜಿ. ವೀರನಗೌಡ, ಬೆಣ್ಣೆ ಹಳ್ಳಿ ರಾಜಣ್ಣ, ಕೆಂಚನಹಳ್ಳಿ ಮಹಾಂತೇಶ್, ಆದಾಪುರ ವೀರೇಶ್, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ಬಿಜೆಪಿ ಅಭ್ಯರ್ಥಿಗಳಾದ ಆನಂದಾಚಾರ್, ಚಂದ್ರಮ್ಮ ಕೋಂ ಚಂದ್ರಪ್ಪ, ಬೆಣ್ಣೆಹಳ್ಳಿ ಸಿದ್ದೇಶ್, ಮೀನಾಕ್ಷಮ್ಮ ಜಿಗಳೇರ ಹಾಲೇಶಪ್ಪ, ಸುಲೋಚನಮ್ಮ ಓ.ಜಿ. ಕುಮಾರ್, ಸುಧಾ ಪಿ.ಆರ್. ರಾಜು, ಭೋವಿ ಹನುಮಂತಪ್ಪ, ಕಡ್ಲೇಗೊಂದಿ ಕೇಶವ, ಅಕ್ಕಮ್ಮ ಬಿ.ಸುರೇಶ್, ಬಿ. ಮಂಜುನಾಥ್, ಸುನೀತಾ ಇಟಗಿ ಸುರೇಶ್, ಪಿ.ಹೆಚ್. ಮಂಜುನಾಥ್, ನಾಯಕರ ದುರುಗಪ್ಪ ಮತ್ತಿತರರು ಭಾಗವಹಿಸಿದ್ದರು.