ದಾವಣಗೆರೆ, ಡಿ.24- ಪಂಚಮಸಾಲಿ ಸಮುದಾಯದವರು 3ಬಿ ಯಿಂದ ಹಿಂದುಳಿದ ವರ್ಗಗಳ 2ಎಗೆ ಸೇರಿಸಿ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿರುವ ಸಂಬಂಧ ಆ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಆದಷ್ಟು ಬೇಗ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದವರು 3ಬಿ ಯಿಂದ 2ಎಗೆ ಸೇರಿಸಬೇಕೆಂಬ ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಆಯೋಗದಿಂದ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ನೆಲೆಸಿರುವ ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಕಾರ್ಯ ದಾವಣಗೆರೆ ಜಿಲ್ಲೆಯಿಂದ ಇಂದಿನಿಂದ ಆರಂಭಿಸಲಾಗಿದ್ದು, ಮೂರು ದಿನಗಳ ಕಾಲ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದರು.
ಈಗಾಗಲೇ ಪಂಚಮಸಾಲಿ ಸಮಾಜ ಹಿಂದುಳಿದ ವರ್ಗಗಳ 3ಬಿ ಪಟ್ಟಿಯಲ್ಲಿದ್ದು, 2ಎ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಕೆಲವು ಸಮಾಜಗಳು ಪಂಚಮಸಾಲಿ ಸಮಾಜವನ್ನು 2ಎ ಪಟ್ಟಿಗೆ ಸೇರಿಸಬಾರದಾಗಿ ಮನವಿ ನೀಡಿದ್ದಾರೆ. ಹಾಗಾಗಿ ಪಂಚಮಸಾಲಿ ಸಮಾಜ ವಾಸಿಸುವ ಪ್ರದೇಶ, ಕುಲ ಕಸುಬು ಮತ್ತು ಅವರುಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಬಗ್ಗೆ ವಸ್ತುನಿಷ್ಠ ಸಮೀಕ್ಷೆ ನಡೆಸಿ, ಯಾವ ಸಮುದಾಯದವರಿಗೂ ಅನ್ಯಾಯವಾಗದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಆಯೋಗಕ್ಕೆ ವರದಿ ಸಲ್ಲಿಸಲು ಯಾವುದೇ ಕಾಲ ಮಿತಿ ನಿಗದಿಪಡಿಸಿಲ್ಲ. ಆದರೆ, ನಮಗೆ ಎರಡು ವರ್ಷ ಅವಧಿಯಿದ್ದು, ಅಷ್ಟರೊಳಗೆ ಪಂಚಮಸಾಲಿ ಸಮಾಜದವರು ನೆಲೆಸಿರುವ ರಾಜ್ಯದ 9ರಿಂದ 10 ಜಿಲ್ಲೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಸಮಗ್ರ ವರದಿ ತಯಾರಿಸಿ ಆದಷ್ಟು ಬೇಗ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದರು.
ತೆಲಂಗಾಣದ ಮಾದರಿಯಂತೆ ಅನಾಥ ಮಕ್ಕಳಿಗೂ ಸೌಲಭ್ಯ: ಅನಾಥಾಶ್ರಮಗಳಲ್ಲಿರುವ ಮಕ್ಕಳನ್ನು ಭೇಟಿ ಮಾಡಿ, ಆ ಮಕ್ಕಳ ಮುಂದಿನ ಶೈಕ್ಷಣಿಕ ಹಾಗೂ ಉದ್ಯೋಗದ ಹಿತದೃಷ್ಟಿಯಿಂದ ಯಾವ ಜಾತಿಗೆ ಸೇರಿದ್ದಾರೆಂಬ ಬಗ್ಗೆ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲದೇ ಆ ಮಕ್ಕಳನ್ನು ಆ ಸಮುದಾಯದ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುವುದು. ಈ ವಿಷಯಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಹಲವು ಅನಾಥಾಶ್ರಮಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ಅಲ್ಲಿ ಅನುಸರಿಸುತ್ತಿರುವ ಮಾದರಿಯಂತೆ ಇಲ್ಲಿನ ಮಕ್ಕಳಿಗೂ ಸೌಲಭ್ಯ ಒದಗಿಸಲು ಶ್ರಮಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಆಯೋಗದ ಸದಸ್ಯರುಗಳಾದ ಕಲ್ಯಾಣ್ ಕುಮಾರ್, ಟಿ.ಪಿ. ಸುವರ್ಣ, ರಾಜಶೇಖರ್, ಅರುಣ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ ಸೇರಿದಂತೆ, ಇತರರು ಇದ್ದರು.
ಪಂಚಮಸಾಲಿ ಸಮಾಜ ವಾಸದ ಪ್ರದೇಶಗಳಿಗೆ ಭೇಟಿ: ಆಯೋಗವು ಜಿಲ್ಲೆಯ ಪಂಚಮಸಾಲಿ ಸಮಾಜದವರು ವಾಸಿಸುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಕುಲ ಕಸುಬು ಮತ್ತು ಅವರುಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಅಧ್ಯಯನ ನಡೆಸಿತು.