ಬಾಲ್ಯವಿವಾಹ, ಬಾಲಕಾರ್ಮಿಕತೆ ಗ್ರಾಮ ಮಟ್ಟದಲ್ಲಿ ಜರುಗುತ್ತಿರುವುದು ಮೊದಲು ತಿಳಿಯುವುದೇ ಗ್ರಾಮ ಮಟ್ಟದ ಅಧಿಕಾರಿಗಳಿಗೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಗಳು ಒತ್ತಡ ಹಾಗೂ ಪ್ರಭಾವಗಳನ್ನು ಬದಿಗೊತ್ತಿ, ಹೆಚ್ಚಿನ ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು.
– ಡಾ. ವಿಜಯ ಮಹಾಂತೇಶ್, ಸಿಇಒ,
ದಾವಣಗೆರೆ, ಡಿ. 23- ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಹಲವಾರು ಶೋಷಣೆಗಳಿಂದ ಮಕ್ಕಳನ್ನು ರಕ್ಷಿಸಿ, ಅವರ ಬೆಳವಣಿಗೆಗೆ ಪೂರಕವಾದಂತಹ ವಾತಾವರಣ ಕಲ್ಪಿಸುವುದು ಗ್ರಾಮ ಪಂಚಾಯ್ತಿಗಳ ಹೊಣೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಹೇಳಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ‘ಮಕ್ಕಳ ಗ್ರಾಮಸಭೆ ಅನುಷ್ಠಾನ ಮತ್ತು ಮಕ್ಕಳ ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯತ್‍ಗಳ ಪಾತ್ರ’ ಕುರಿತು ಗ್ರಾ.ಪಂ. ಪಿಡಿಒಗಳು ಹಾಗೂ ಕಾರ್ಯದರ್ಶಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಗೆ ಆಯೋಗ, ಸಮಿತಿ, ಹಲವಾರು ಕಾಯ್ದೆಗಳಿವೆ ಇವೆ. ಭ್ರೂಣ ಹತ್ಯೆ ತಡೆಗೆ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ತಡೆಗಾಗಿ ಕಾಯ್ದೆ ಗಳಿವೆ. ಕಡ್ಡಾಯ ಶಿಕ್ಷಣದ ಹಕ್ಕು, ಮಧ್ಯಾಹ್ನದ ಬಿಸಿ ಯೂಟ ಅಲ್ಲದೆ ಅನೇಕ ಯೋಜ ನೆಗಳು ಕೂಡ ಇವೆ. ಆದಾಗ್ಯೂ ಮಕ್ಕಳ ರಕ್ಷಣೆ ಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲದಿ ರುವುದು ಬೇಸರದ ಸಂಗತಿ ಎಂದರು.
ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮಸಭೆಗಳು ಕಾಟಾಚಾರಕ್ಕೆ ನಡೆಯದೇ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು. ಹೆಚ್ಚು ಮಕ್ಕಳು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಹಾಗೂ ಹಕ್ಕುಗಳನ್ನು ಮಂಡಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಪಿಡಿಒಗಳ ಜವಾಬ್ದಾರಿ ಮಹತ್ವದ್ದು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಸಾಕಷ್ಟು ಕಾಯ್ದೆಗಳು ಬಂದಿವೆ. ಶಾಸನ ಸಭೆಗಳು ಅನೇಕ ತಿದ್ದುಪಡಿಗಳನ್ನು ತಂದು, ಮಕ್ಕಳ ಹಕ್ಕುಗಳ ರಕ್ಷಣೆಗೆ ಅನುಕೂಲವಾಗಿದೆ. ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಪಿಡಿಒಗಳು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವಂತಹ ಯೋಜನೆ, ಕಾಯ್ದೆ, ನೀತಿಗಳನ್ನು ಸರಿಯಾಗಿ ಅರಿತುಕೊಂಡಾಗ ಮಾತ್ರ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದು ಹೇಳಿದರು.
ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ರಾಘವೇಂದ್ರಭಟ್ ಮಾತನಾಡಿ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಹೆಚ್ಚು ಇರುವಂತಹ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಮೇಲೇರಲು ಸಾಧ್ಯವಿಲ್ಲ. ಮಕ್ಕಳ ಪ್ರತಿಯೊಂದು ಹಂತದ ಬೆಳವಣಿಗೆಯ ಮೇಲೆ ನಿಗಾ ಇರಿಸುವುದು ಗ್ರಾಮ ಪಂಚಾಯತ್‍ಗಳ ಜವಾಬ್ದಾರಿಯಾಗಿದ್ದು, 0-6 ವರ್ಷದ ಮಕ್ಕಳಿಗೆ 9 ಬಗೆಯ ಚುಚ್ಚುಮದ್ದು ಕೊಡಿಸುವುದು, ಅಂಗನವಾಡಿ ಹಾಗೂ ಶಾಲೆಗಳಿಗೆ ಮಕ್ಕಳ ದಾಖಲಾತಿ, ಅವರಿಗೆ ಉತ್ತಮ ಆಹಾರ, ನೀರು ಪೂರೈಕೆ, ಜನನ ಪ್ರಮಾಣ ಪತ್ರ ನೀಡುವುದು, ಹದಿಹರೆಯದವರ ಸಬಲೀಕರಣ, ವಿವಿಧ ಇಲಾಖೆಗಳ ಸಮನ್ವಯತೆ ಸಾಧಿಸುವುದು ಇವೆಲ್ಲವುಗಳ ಮೇಲಿನ ಮೇಲುಸ್ತುವಾರಿ ಗ್ರಾಮ ಪಂಚಾಯ್ತಿಗಳ ಹೊಣೆಯಾಗಿದೆ ಎಂದರು.
ಡಿಡಿಪಿಐ ಟಿ. ತಿಪ್ಪೇಶಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಉಪಸ್ಥಿತರಿದ್ದರು.