ಓಮಿಕ್ರಾನ್ ತಡೆಯಲು ಸೂಕ್ತ ಮುನ್ನೆಚ್ಚರಿಕೆ

ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಸೂಚನೆ

ಮನೆ ಪರಿಹಾರ ಪಡೆಯಲು ಬಾರದ ಜನರು

ಮಳೆಯಿಂದ ಮನೆಗಳನ್ನು ಕಳೆದುಕೊಂಡವರಿಗೆ ತಲಾ 5 ಲಕ್ಷ ರೂ. ಪರಿಹಾರ ಪ್ರಕಟಿಸಲಾಗಿದೆಯಾದರೂ, ಅವರು ಮನೆ ಕಟ್ಟಿಕೊಳ್ಳಲು ಮುಂದಾಗುತ್ತಿಲ್ಲ.

5 ಲಕ್ಷ ರೂ. ಪರಿಹಾರವನ್ನು ಕಂತುಗಳಲ್ಲಿ ನೀಡಲಾಗುತ್ತದೆ. ಈ ಮನೆಗಳ ಮಾಲೀಕರು ಮೊದಲ ಕಂತಿನ 95 ಸಾವಿರ ರೂ.ಗಳನ್ನು ಮಾತ್ರ ಪಡೆದಿದ್ದಾರೆ. 2020-21ರಲ್ಲಿ 74 ಮನೆಗಳಿಗೆ ಪರಿಹಾರ ಬಿಡುಗಡೆ ಮಾಡಿದ್ದರೆ, ಈ ಪೈಕಿ ಒಂದು ಮನೆ ಮಾತ್ರ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಪರಿಹಾರದ ಮೊತ್ತವನ್ನು ತಾತ್ಕಾಲಿಕವಾಗಿ ತಡೆದಿರುವುದಾಗಿ ಸಂಬಂಧಿಸಿದವರಿಗೆ ನೋಟಿಸ್‌ ಕಳಿಸಿ. ಅವರು ಹಣ ಪಡೆಯಲು ಮುಂದೆ ಬಂದರೆ ಮಾತ್ರ ಮುಂದಿನ ಕಂತು ಬಿಡುಗಡೆ ಮಾಡಿ ಎಂದು ಉಮಾಶಂಕರ್ ಹೇಳಿದರು.

ದಾವಣಗೆರೆ, ಡಿ. 23 – ಓಮಿಕ್ರಾನ್ ರೂಪಾಂತರಿ ಜಿಲ್ಲೆಯಲ್ಲಿ ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊರೊನಾ ಹಾಗೂ ಮಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಶೇ.99ರಷ್ಟು ಜನರು ಮೊದಲ ಡೋಸ್ ಹಾಗೂ ಶೇ.75ರಷ್ಟು ಜನರು ಎರಡನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದು, ರಾಜ್ಯದ ಸರಾಸರಿಗಿಂತ ಲಸಿಕೆ ಪ್ರಮಾಣ ಹೆಚ್ಚಾಗಿದೆ. ಇದು ಉತ್ತಮ ಸಾಧನೆಯಾಗಿದೆ. ಇದರ ಜೊತೆಗೆ ಓಮಿಕ್ರಾನ್ ಎದುರಿಸಲು ಆಸ್ಪತ್ರೆ, ಆಕ್ಸಿಜನ್, ಔಷಧಿ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದವರು ಹೇಳಿದ್ದಾರೆ.

ಕಳೆದ ಐದು ದಿನಗಳಿಂದ ಯಾವುದೇ ಕೊರೊನಾ ಪ್ರಕರಣಗಳು ಬಂದಿಲ್ಲ, ಪ್ರಸಕ್ತ ಮೂವರು ಮಾತ್ರ ಸಕ್ರಿಯ ಸೋಂಕಿತರಿದ್ದಾರೆ. ಕೊರೊನಾ ಟೆಸ್ಟ್‌ಗಳಲ್ಲಿ ಪಾಸಿಟಿವಿಟಿ ದರ ಶೇ.0.04ರಷ್ಟಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಜಿ.ಡಿ. ರಾಘವನ್ ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತ ನಾಡಿ, ಜಿಲ್ಲೆಯ ಆಕ್ಸಿಜನ್ ಘಟಕಗಳ ನಿರ್ವಹಣೆಗೆ ಒಟ್ಟು 11 ಸಿಬ್ಬಂದಿ ಬೇಕಾಗಿದ್ದಾರೆ. ಇವರ ನೇಮಕಕ್ಕೆ ಸರ್ಕಾರ ಅನುಮತಿ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಉಮಾಶಂಕರ್, ಓಮಿಕ್ರಾನ್ ಸೋಂಕು ಡೆಲ್ಟಾಗಿಂತ ಮೂರು ಪಟ್ಟು ವೇಗವಾಗಿ ಹರಡುತ್ತದೆ. ಲಸಿಕೆ ಪಡೆದವರಿಗೂ ಸೋಂಕು ಬರುತ್ತಿದೆ. ಹೀಗಾಗಿ ಸೂಕ್ತ ಎಚ್ಚರಿಕೆ ವಹಿಸ ಬೇಕು. ಡೆಲ್ಟಾ ಅತಿ ಹೆಚ್ಚಿನ ಮಟ್ಟಕ್ಕೆ ತಲು ಪಿದ ಹಂತದಲ್ಲಿ ಮಾಡಿಕೊಂಡ ಸಿದ್ಧತೆಯನ್ನೇ ಈಗಲೂ ಮಾಡಿಕೊಳ್ಳ ಬೇಕು ಎಂದರು.

ಶಾಲೆಗಳಿಗೆ ಆದ್ಯತೆ : ಜಿಲ್ಲೆಯಲ್ಲಿ ಮಳೆಯಿಂದಾಗಿ ರಸ್ತೆ, ಸೇತುವೆ, ಶಾಲೆ ಇತ್ಯಾ ದಿಗಳು ಸೇರಿದಂತೆ ಮೂಲಭೂತ ಸೌಲಭ್ಯ ಗಳಿಗೆ 132 ಕೋಟಿ ರೂ.ಗಳ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಹಾನಿಗಾಗಿ ಸರ್ಕಾರ ಪರಿಹಾರ ಬಿಡುಗಡೆ ಮಾಡಿದಾಗ ಶಾಲೆಗಳ ದುರಸ್ತಿಗೆ ಮೊದಲ ಆದ್ಯತೆ ನೀಡುವಂತೆ ಉಮಾಶಂಕರ್ ಸೂಚಿಸಿದರು.

ಮಳೆ ಹಾನಿ ಬಾಕಿ 4 ಕೋಟಿ ರೂ. : ಜಿಲ್ಲೆಯಲ್ಲಿ ನವೆಂಬರ್‌ನಲ್ಲಿ ಆದ ಮಳೆಯಿಂದ 15,862 ಹೆಕ್ಟೇರ್‌ ಪ್ರದೇಶದಲ್ಲಿ 13.7 ಕೋಟಿ ರೂ.ಗಳ ಬೆಳೆ ಹಾನಿ ಆಗಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ. ಇದರಲ್ಲಿ 9.03 ಕೋಟಿ ರೂ.ಗಳು 19 ಸಾವಿರ ರೈತರ ಖಾತೆಗಳಿಗೆ ಜಮಾ ಆಗಿದೆ. ಇನ್ನೂ 4 ಕೋಟಿ ರೂ.ಗಳ ಬಾಕಿ ಬರಬೇಕಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಚಿಂತಾಲ್ ತಿಳಿಸಿದರು.

ಸರ್ಕಾರ ಹಲವು ಕಂತುಗಳಲ್ಲಿ ಹಣ ಬಿಡುಗಡೆ ಮಾಡುತ್ತಿದೆ. ವಾರದಲ್ಲೇ ರೈತರ ಪರಿಹಾರದ ಉಳಿದ ಕಂತಿನ ಹಣ ಬಿಡುಗಡೆಯಾಗಲಿದೆ ಎಂದು ಉಮಾಶಂಕರ್ ತಿಳಿಸಿದರು.

ತೋಟಗಾರಿಕೆಗೆ 25 ಕೋಟಿ ರೂ. : ಹವಾಮಾನ ಬೆಳೆ ವಿಮೆ ಯೋಜನೆಯ ಅನ್ವಯ 8,217 ಹೆಕ್ಟೇರ್‌ ಬೆಳೆ ನಾಶವಾಗಿ ರುವ ರೈತರಿಗೆ 25 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ. ಆದರೆ, ವೀಳ್ಯದ ಎಲೆಗೆ ಆಗಿರುವ ನಷ್ಟಕ್ಕೆ ಪರಿಹಾರ ಸಿಕ್ಕಿರುವು ದಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಬೆಳೆ ವಿಮೆ ಯೋಜನೆಯಿಂದ ರೈತರಿಗೆ ಕಡಿಮೆ ಕಂತಿನಲ್ಲಿ ಹೆಚ್ಚು ಲಾಭವಾಗುತ್ತದೆ. ಬೇರೆ ಜಿಲ್ಲೆಗಳಲ್ಲಿ ರೈತರಿಗೆ ಗರಿಷ್ಠ ನೆರವು ನೀಡಲಾಗಿದೆ. ಇಲ್ಲೂ ಸಹ ವಿಮೆ ಹಾಗೂ ಪರಿಹಾರ ಪ್ರಮಾಣ ಹೆಚ್ಚಾಗುವಂತೆ ಮಾಡಬೇಕು ಎಂದು ಉಮಾಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಎಸ್‌ಪಿ ಸಿ.ಬಿ. ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಹೆಚ್‍ಒ ಡಾ. ನಾಗರಾಜ, ಮತ್ತಿತರರು ಉಪಸ್ಥಿತರಿದ್ದರು.

error: Content is protected !!