ಹರಪನಹಳ್ಳಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಒತ್ತಾಯ
ಹರಪನಹಳ್ಳಿ, ಡಿ.23- ಕೊರೊನಾ ಸಮಯದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕೇರಳ ಮಾದರಿಯಲ್ಲಿ ವೇತನ ನೀಡಬೇಕೆಂದು ಮಾಜಿ ಸಚಿವ ಸಂತೋಷ ಲಾಡ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದ ಆವರಣದಲ್ಲಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಪೌರ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಸಾರ್ವಜನಿಕರ ಜೀವ ಉಳಿಸಲು ಸಾಕಷ್ಟು ಶ್ರಮಿಸಿದ್ದಾರೆ. ನಿಮ್ಮ ಸೇವೆಯನ್ನು ಭಾರತ ಎಂದುೂ ಮರೆಯಲಿಕ್ಕೆ ಸಾಧ್ಯವಿಲ್ಲ. ನಿಮ್ಮನ್ನು ಗೌರವಿಸಿ ಸನ್ಮಾನಿಸಲು ನಮಗೆ ಅವಕಾಶ ಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಿಂದ ಹಿಡಿದು ವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಅಲ್ಲದೇ ನಾನು ಕಾರ್ಮಿಕ ಮಂತ್ರಿಯಾಗಿದ್ದಾಗ ಪೌರಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಿದ್ದೇನೆ, ಇಷ್ಟೆಲ್ಲ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದ್ದು ನೀವ್ಯಾರೂ ಕಾಂಗ್ರೆಸ್ ಪಕ್ಷವನ್ನು ಮರೆಯಬಾರದು ಎಂದು ಹೇಳಿದರು
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಬಹಿರಂಗವಾಗಿ ರಾಜಕೀಯದಲ್ಲಿ ಭಾಗವಹಿಸಬೇಕು. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನಮ್ಮ ಗಮನಕ್ಕೆ ತನ್ನಿ ಯಾರಿಗೂ ಹೆದರುವ ಪ್ರಶ್ನೆ ಬೇಡ, ನಿಮ್ಮ ಸಮಸ್ಯೆಗೆ ಸ್ಪಂದಿಸುವ ರಾಜಕಾರಣಿಗಳನ್ನು ಗೆಲ್ಲಿಸಿ ಸ್ಪಂದಿಸದೇ ಇರುವವರನ್ನು ಸೋಲಿಸಿ ಎಂದು ಸಂತೋಷ್ ಲಾಡ್ ಬಹಿರಂಗವಾಗಿ ಹೇಳಿದರು.
ವಕೀಲ ಅನಂತ್ನಾಯ್ಕ ಮಾತನಾಡಿದರು.
ಎಐಸಿಸಿ ವಕ್ತಾರರಾದ ಕವಿತಾ ರೆಡ್ಡಿ ಮಾತನಾಡಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸನ್ಮಾನ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಇಲ್ಲಿ ಶಾಸಕ ಕರುಣಾಕರ ರೆಡ್ಡಿ ಆದೇಶ ಮಾಡಿ, ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ ಸ್ವಾಮಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಆಶಾಲತಾ, ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿದ್ದು ಹಳ್ಳೇಗೌಡ, ಮುಖಂಡರಾದ ಎಂ.ಟಿ ಸುಭಾಷ್ ಚಂದ್ರ, ಬೇಲೂರು ಅಂಜಪ್ಪ, ಕೋಡಿಹಳ್ಳಿ ಭೀಮಪ್ಪ, ಮುಂಡರಗಿ ನಾಗರಾಜ್, ಎ.ಎಂ.ವಿಶ್ವನಾಥ್, ಇರ್ಫಾನ್ ಮುದಗಲ್, ತೆಲಗಿ ಟಿ. ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.