ಬಜೆಟ್ ಕಾಮಗಾರಿಗಳ ನಿರ್ಲಕ್ಷ್ಯ, ಸದಸ್ಯರ ಒಕ್ಕೊರಲ ಅಸಮಾಧಾನ

ರಾಣೇಬೆನ್ನೂರು, ಡಿ. 22 – ಬಜೆಟ್ ಪೂರ್ವ ಸಭೆಯಲ್ಲಿ ನಗರ ಸಭೆ ಸದಸ್ಯರು, ಸಾರ್ವಜನಿಕರು ನೀಡಿದ ಸಲಹೆಯ ಕಾಮ ಗಾರಿಗಳಲ್ಲಿ ಒಂದನ್ನೂ ಸಹ ಕೈಗೆತ್ತಿಕೊಂಡಿಲ್ಲ. ಇದೊಂದು ಕಾಟಾಚಾರದ ಸಭೆಯಂತಾಗಿದೆ ಎಂದು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಒಕ್ಕೊರಲಿನಿಂದ ಹೇಳಿದರು.

ನಗರಸಭೆ ಅಧ್ಯಕ್ಷರಾದ ರೂಪಾ ಚಿನ್ನಿಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಇಂದು ಕರೆದಿದ್ದ ಬಜೆಟ್ ಪೂರ್ವ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ, ಕಾಂಗ್ರೆಸ್ ಸದಸ್ಯರು ಮಾತನಾಡಿದರು.

ಒಳಚರಂಡಿ ಹಾಗೂ 24×7 ಕುಡಿಯುವ ನೀರು ಯೋಜನೆ  ಗಳು ಸಮರ್ಪಕ ವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಂಪೂರ್ಣ ಯಶಸ್ಸು ಕಾಣದೆ ಜನರ ನಿಂದನೆಗೆ ಗುರಿಯಾಗಿವೆ. ಅವುಗಳನ್ನು ಸರಿಪಡಿಸಿ ಜನಮನ್ನಣೆ ಪಡೆಯುವ ಕೆಲಸ ಮಾಡಬೇಕಿದೆ. ರಸ್ತೆಗಳ ಅಭಿವೃದ್ಧಿ ಆಗಬೇಕಿದೆ.

ನಗರಕ್ಕೆ ಬರುವ ಹೆದ್ದಾರಿಗಳ ಜೊತೆಗೆ ಗ್ರಾಮೀಣ ಭಾಗಗಳಿಂದ ಬರುವ ರಸ್ತೆಗಳ ಡಾಂಬರೀಕರಣ ಆಗಬೇಕು. ಎಲ್ಇಡಿ ದೀಪಗಳನ್ನು ಅಳವಡಿಸಿ ಸುಂದರಗೊಳಿಸ ಬೇಕು. ಹಲಗೇರಿ ರಸ್ತೆಯ ಸ್ಮಶಾನಕ್ಕೆ ವಿದ್ಯುತ್ ಚಿತಾಗಾರ ಹಾಗೂ ಶವ ವಾಹನ ಕೊಡ ಬೇಕು. ಅವಶ್ಯವಿದ್ದಲ್ಲಿ ರಾಜ ಕಾಲುವೆ ನಿರ್ಮಾಣ, ನಗರದಾದ್ಯಂತ ಉಚಿತ ಶೌಚಾಲಯ ಕಟ್ಟಿಸಬೇಕು.

ನಗರಾದ್ಯಂತ ಇರುವ ಕಾಯಿಪಲ್ಯೆ ವ್ಯಾಪಾರಿಗಳಿಗೆ ಸರಿಯಾದ ಜಾಗ ಗುರುತಿಸಿ, ವ್ಯಾಪಾರ, ವಹಿವಾಟು ಶಿಸ್ತಿ ನಿಂದ ನಡೆಯುವಂತೆ ವ್ಯವಸ್ಥೆ ಮಾಡಬೇಕಿದೆ. ನಗರಸಭೆಯ ಆಸ್ತಿ ತಾ.ಪಂ. ಕಟ್ಟಡವನ್ನು ನಗರಸಭೆಯ ವಶಕ್ಕೆ ಪಡೆಯ ಬೇಕು. ನಿರ್ಮಾಣಗೊಂಡ ಮಳಿಗೆಗಳನ್ನು ಹರಾಜು ಮಾಡಿ ನಗರಸಭೆಯ ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು ಮುಂತಾದ ಸಲಹೆಗಳು ಸದಸ್ಯರಿಂದ ಬಂದವು.  ಒಟ್ಟು 35ರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಕೇವಲ 14 ಸದಸ್ಯರು ಕೈ ಬೆರಳೆಣಿಕೆಯಷ್ಟು ಸಾರ್ವಜನಿಕರು ಪಾಲ್ಗೊಂಡಿದ್ದರು. 

ವೇದಿಕೆಯಲ್ಲಿ   ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಗಲರ, ಪೌರಾಯುಕ್ತ ಉದಯಕುಮಾರ, ಮ್ಯಾನೇಜರ್ ಶಂಕರ್ ಉಪಸ್ಥಿತರಿದ್ದರು.

error: Content is protected !!