ಹೊನ್ನಾಳಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ
ಹೊನ್ನಾಳಿ, ಡಿ.22- ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು, ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಕಲಾ ಬಂಧು ಫೌಂಡೇಷನ್ ನೀಡುವ 2021ರ `ಕನ್ನಡ ರತ್ನ’ ರಾಜ್ಯ ಪ್ರಶಸ್ತಿ ವಿಜೇತ ರಟ್ಟಿಹಳ್ಳಿ ತಾಲ್ಲೂಕು ಅಣಜಿ-ನಾಗವಂದದ ಶ್ರೀ ಮಾರುತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಮೂಲತಃ ಹೊನ್ನಾಳಿ ತಾಲ್ಲೂಕಿನ ಕೋಣನತಲೆ ಗ್ರಾಮದ ಎಚ್.ಇ. ರವಿಕುಮಾರ್ ಅವರನ್ನು ಪಟ್ಟಣದ ಸುಂಕದಕಟ್ಟೆ ರಸ್ತೆಯ ವಾಲ್ಮೀಕಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಸಮಾಜದ ಸಭೆಯಲ್ಲಿ ಸನ್ಮಾನಿಸಿ, ಶ್ರೀಗಳು ಆಶೀರ್ವಚನ ನೀಡಿದರು.
ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಪೋಷಕರ ಜವಾಬ್ದಾರಿ ಮಹತ್ತರವಾದುದು. ಯಾವುದೇ ಒಂದು ಮಗು ಕೂಡ ಶಾಲೆಯಿಂದ ಹೊರಗುಳಿಯದಂತೆ ಎಲ್ಲಾ ತಂದೆ-ತಾಯಿಯರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕುಳಗಟ್ಟೆ ಕೆ.ಎಲ್. ರಂಗನಾಥ್, ಗೌರವಾ ಧ್ಯಕ್ಷ ತಿಮ್ಮೇನಹಳ್ಳಿ ಟಿ.ಆರ್. ಚಂದಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.