ಜಗಳೂರು ತಾಲ್ಲೂಕಲ್ಲಿ ಪಂಚಮಸಾಲಿ ಸಮಾಜದ ಸ್ಥಿತಿಗತಿ ಮಾಹಿತಿ ಸಂಗ್ರಹಣೆ

ಜಗಳೂರು, ಡಿ.22- ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಾಲ್ಲೂಕಿನ ಹೊಸಕೆರೆ, ಚಿಕ್ಕಬನ್ನಿಹಟ್ಟಿ  ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಪಂಚಮಸಾಲಿ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಿ ಮತ್ತು ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭೇಟಿ ನೀಡಿ ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ  ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಪಂಚಮಸಾಲಿ ಸಮಾಜದ ಮುಖಂಡರುಗಳು ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ 14 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಸಮಾಜದವರು ವಾಸವಿದ್ದೇವೆ. ಸರ್ಕಾರದಿಂದ ಬರುವ ಯಾವುದೇ ಸೌಲಭ್ಯಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಬರುವ  ವಸತಿ ಯೋಜನೆಗಳಲ್ಲಿ ನಮ್ಮ ಸಮುದಾಯಗಳಿಗೆ  ಸೌಲಭ್ಯಗಳು ಸಿಗುತ್ತಿಲ್ಲ.  ಅಲ್ಪ ಸ್ವಲ್ಪ ಜಮೀನಿನಲ್ಲಿ ಉಳುಮೆ ಮಾಡಿ, ಕೂಲಿನಾಲಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವ ಪರಿಸ್ಥಿತಿ ಇದೆ. ಆದ್ದರಿಂದ ಸಮುದಾಯವನ್ನು 2ಎ ಗೆ ಸೇರಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಕಲ್ಯಾಣ್ ಕುಮಾರ್, ಬಿ.ಎಸ್.ರಾಜಶೇಖರ್, ಕೆ.ಟಿ ಸುವರ್ಣ, ಅರುಣ್ ಕುಮಾರ್‌ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಗಂಗಪ್ಪ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅಸ್ಮಾ ಬಾನು, ವಿಸ್ತರಣಾಧಿಕಾರಿ ವೆಂಕಟೇಶಮೂರ್ತಿ, ತಾ.ಪಂ. ಮಾಜಿ ಸದಸ್ಯ ಸಿದ್ದೇಶ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಯು.ಜಿ ಶಿವಕುಮಾರ್, ಸಮುದಾಯದ ಮುಖಂಡರಾದ ಜಗದೀಶ್ ಗೌಡ, ಚಂದ್ರಶೇಖರ್, ಮುರುಗೇಂದ್ರಪ್ಪ, ಸುಪುತ್ರ ಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!