ಜ.15 ರೊಳಗಾಗಿ ನಕಾಶೆ ಕಂಡ ದಾರಿ ತೆರವುಗೊಳಿಸದಿದ್ದರೆ ರಸ್ತೆತಡೆ ಚಳವಳಿ

ದಾವಣಗೆರೆ, ಡಿ.22-  ತಾಲ್ಲೂಕಿನ ಆನಗೋಡು ಹೋಬಳಿ ಮಲ್ಲಶೆಟ್ಟಿಹಳ್ಳಿ ಗ್ರಾಮದಲ್ಲಿ ನಕಾಶೆಯಲ್ಲಿ ರುವಂತೆ ರಸ್ತೆಗೆ ಜಾಗ ಬಿಡದೇ ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ಒತ್ತುವರಿಯಾದ ಜಾಗವನ್ನು ಬಿಟ್ಟುಕೊಡು ವಂತೆ ಕಾರ್ಮಿಕ ಮುಖಂಡ ಹೆಚ್.ಜಿ. ಉಮೇಶ್ ಆವರಗೆರೆ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಮಲ್ಲಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ.7/2, 7/3, 7/4 ರಲ್ಲಿ ನಕಾಶೆ ಕಂಡ ದಾರಿ ಬಿಡದೇ, ಅನುಮೋದಿತ ವಿನ್ಯಾಸ ನಕ್ಷೆ ಅನ್ವಯ ರಸ್ತೆಯನ್ನು ತೆರವು ಮಾಡಬೇಕು. ಅಲ್ಲದೇ ಇಲ್ಲಿಂದ ಉಳಿದ ಗ್ರಾಮಗಳಿಗೆ ಹೋಗುವ ರಸ್ತೆಯನ್ನು ಹದ್ದುಬಸ್ತು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ಎಲ್ಲಾ ಸರ್ವೆ ನಂಬರ್‌ಗಳಲ್ಲಿ ನಕಾಶೆ ರಸ್ತೆ ಇದ್ದು, ಇಲ್ಲಿ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳು ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆ ಮಾಡುವ ಸಂದರ್ಭದಲ್ಲಿ ನಕಾಶೆಯಲ್ಲಿ ಕಂಡ ರಸ್ತೆಯನ್ನು ತೋರಿಸದೇ ನಕಾಶೆಯನ್ನು ಮಾರ್ಪಾಟು ಮಾಡಿದ್ದು, ಸರ್ವೆ ನಂ. 15 ರಲ್ಲಿ ತೋರಿಸಿದ್ದಾರೆ. ಇದರಿಂದಾಗಿ ಉಳಿದವರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಳು ಮತ್ತು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲವೆಂದು ದೂರಿದರು.

ಉಚ್ಛ ನ್ಯಾಯಾಲಯವು ಕಳೆದ ಮಾರ್ಚ್ 10 ರಲ್ಲಿ ನಕಾಶೆ ಕಂಡ ರಸ್ತೆಯನ್ನು ಬಿಡುವಂತೆ ಆದೇಶ ಮಾಡಿದ್ದರೂ ತೆರವುಗೊಳಿಸಿಲ್ಲ. ಜಿಲ್ಲಾಡಳಿತ ಹೈಕೋರ್ಟ್ ಆದೇಶವನ್ನು ತಿರಸ್ಕರಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಆರೋಪಿಸಿದರು.

ಜಿಲ್ಲಾಡಳಿತ ಗಮನಹರಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಜನವರಿ 15 ರ ನಂತರ ರಸ್ತೆ ತಡೆ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿ. ಲಕ್ಷ್ಮಣ್, ಪಿ.ಕೆ. ಲಿಂಗರಾಜ್, ಶ್ರೀಮತಿ ಮಂಜುಳ, ಹನುಮೇಶ್, ಭರತ್‌ಸಿಂಗ್, ಯಲ್ಲಪ್ಪ, ಮೊಹಮ್ಮದ್ ರಫೀಕ್, ನರೇಗಾ ರಂಗನಾಥ್, ಹೊನ್ನಮ್ಮ, ವನಜಾಕ್ಷಮ್ಮ, ಜಿ.ಆರ್. ನಾಗರಾಜ್ ಉಪಸ್ಥಿತರಿದ್ದರು.

error: Content is protected !!