ಕುಂಬಳೂರಿನಲ್ಲಿ ಬ್ಯಾಂಕಿನ ಅಧ್ಯಕ್ಷ ವೇಣುಗೋಪಾಲ ರೆಡ್ಡಿ ಭರವಸೆ
ಮಲೇಬೆನ್ನೂರು, ಡಿ.22- ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿ ನಿಂದ ರೈತರಿಗೆ ಹೊಸ ಸಾಲ ಮತ್ತು ಹೆಚ್ಚುವರಿ ಸಾಲವನ್ನು ಪಿಎಸಿಎಸ್ ಗಳ ಮೂಲಕ ಶೀಘ್ರ ನೀಡುವುದಾಗಿ ಬ್ಯಾಂಕಿನ ಅಧ್ಯಕ್ಷ ಜೆ.ಎಸ್. ವೇಣು ಗೋಪಾಲ ರೆಡ್ಡಿ ತಿಳಿಸಿದ್ದಾರೆ.
ಕುಂಬಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ಹರಿಹರ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಿಎಸಿಎಸ್ ಹಾಗೂ ಡಿಸಿಸಿ ಬ್ಯಾಂಕಿನ ಅಭಿವೃದ್ಧಿಗೆ ರೈತರು ತಮ್ಮಲ್ಲಿರುವ ಉಳಿತಾಯದ ಹಣವನ್ನು ಖಾಸಗಿ ಬ್ಯಾಂಕಿನಲ್ಲಿ ಠೇವಣಿ ಮಾಡುವ ಬದಲು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಮಾಡುವ ಮೂಲಕ ಸಹಕರಿಸಬೇಕೆಂದು ವೇಣುಗೋಪಾಲ ರೆಡ್ಡಿ ಮನವಿ ಮಾಡಿದರು.
ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ತಾವರೆನಾಯ್ಕ ಅವರು ಸಂಘದ ಸಾಲ ಹಂಚಿಕೆ, ಸುಸ್ತಿ ಬಾಕಿ ಮತ್ತು ವಸೂ ಲಾತಿಯ ವಿವರ ಪಡೆದರು.
ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಬಿ. ಶೇಖರಪ್ಪ, ನಿರ್ದೇಶಕರಾದ ಹೊಳೆಸಿರಿಗೆರೆಯ ಬಿ. ಹಾಲೇ ಶಪ್ಪ, ಬ್ಯಾಂಕಿನ ಮಲೇಬೆನ್ನೂರು ಶಾಖೆಯ ಮೇಲ್ವಿಚಾರಕ ಹೆಚ್.ಸಿ. ಶಿವಕುಮಾರ್, ಹರಿಹರ ಶಾಖೆಯ ಮೇಲ್ವಿಚಾರಕ ಮೊಹಮ್ಮದ್ ಇಲಿಯಾಸ್, ಕುಂಬಳೂರು ಪಿಎಸಿಎಸ್ ಅಧ್ಯಕ್ಷ ಡಿ.ಕೆ. ಸ್ವಾಮಿ ಹಾಗೂ ನಿರ್ದೇಶಕರು ಹಾಜರಿದ್ದರು.
ಜಿಗಳಿ ಪಿಎಸಿಎಸ್ ಸಿಇಓ ಎನ್.ಎನ್. ತಳವಾರ್ ಪ್ರಾರ್ಥಿಸಿದರು. ಯಲವಟ್ಟಿ ಸಿಇಓ ಶೇಖರಪ್ಪ ಸ್ವಾಗತಿಸಿದರು. ಗಂಗನರಸಿ ಸಿಇಓ ಮಹಾದೇವಪ್ಪ ವಂದಿಸಿದರು.