ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ಗೆ 7 ಕ್ರೀಡಾಪಟುಗಳು

ಜಿಲ್ಲೆಯಲ್ಲಿ ಸೌಲಭ್ಯಗಳ ಕೊರತೆ

ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಜಿಲ್ಲೆಯಲ್ಲಿ ಸೌಲಭ್ಯಗಳ ಕೊರತೆ ಪ್ರಮುಖವಾಗಿ ಕಂಡುಬರುತ್ತಿದೆ

ತರಬೇತಿ ನೀಡಲು ಪ್ರತ್ಯೇಕವಾದ ಕೋಚ್‌ಗಳಿಲ್ಲ. ವಿಕಲಚೇತನ ಬ್ಯಾಡ್ಮಿಂಟನ್ ಆಟಗಾರರಿಗೆ ತಕ್ಕನಾದ ವ್ಹೀಲ್‌ಚೇರ್‌ಗಳಿಲ್ಲ. ಪ್ರತ್ಯೇಕ ಅಂಕಣದ ಅವಶ್ಯವಿದೆ ಎಂದು ಬಿ.ಎಸ್. ಇಂದೂಧರ ತಮ್ಮ ಅಳಲನ್ನು ತೋಡಿಕೊಂಡರು.

ಜಿಲ್ಲಾ ಸಂಸ್ಥೆಯವರ ಸಹಕಾರ ಬಿಟ್ಟರೆ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯಾವ ಸಹಾಯಧನ ಇಲ್ಲದಿರುವುದು ಬೇಸರದ ಸಂಗತಿ ಎಂದರು.

ದಾವಣಗೆರೆ, ಡಿ.21- ಒಡಿಸ್ಸಾದ ಭುವನೇಶ್ವರದಲ್ಲಿ ಇದೇ ದಿನಾಂಕ 24 ರಿಂದ 26 ರವರೆಗೆ ನಡೆಯಲಿರುವ 4 ನೇಯ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಏಳು ವಿಕಲಚೇತನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪ್ಯಾರಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಡಾ. ಎ.ಎನ್. ಶಿವಕುಮಾರ್ ಅವರು ನಗರದ ನೇತಾಜಿ ಸುಭಾಶ್ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯದಿಂದ ಆಯ್ಕೆಯಾದ 15 ಆಟಗಾರರ ಪೈಕಿ ಏಳು ಜನ ದಾವಣಗೆರೆ ಜಿಲ್ಲೆಯವರೇ ಆಗಿರುವುದು ಹೆಮ್ಮೆಯ ವಿಚಾರ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ, 11 ಪದಕಗಳನ್ನು ಪಡೆದಿದ್ದಾರೆ.

ಎ. ಸುಧಾ, ಕೆ. ಶಿಲ್ಪ, ಎಂ. ರುದ್ರಪ್ರಸನ್ನ, ಬಿ.ಎಸ್. ಇಂದೂಧರ, ಎ. ಅಬ್ದುಲ್ ಗಫೂರ್, ಬಿ.ಆರ್. ಪಾಂಡುರಂಗ ಸ್ವಾಮಿ, ಡಿ.ಎನ್. ಹನುಮಂತಪ್ಪ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾದ ಹೆಮ್ಮೆಯ ಕ್ರೀಡಾಪಟುಗಳು ಎಂದು ಡಾ. ಶಿವಕುಮಾರ್ ಪರಿಚಯಿಸಿದರು.

ಭುವನೇಶ್ವರದಲ್ಲಿ 6 ಕೆಟಗರಿಯಲ್ಲಿ ಪಂದ್ಯಾವಳಿ ನಡೆಯ ಲಿದ್ದು, ಡಬ್ಲ್ಯು ಹೆಚ್ 1 ಹಾಗೂ ಡಬ್ಲ್ಯುಹೆಚ್ 2 ಕೆಟಗರಿಯಲ್ಲಿ ಜಿಲ್ಲೆಯ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಅವರು ನಾಳೆ ದಿನಾಂಕ 21ರ ಬುಧವಾರ ನಗರದಿಂದ ರೈಲಿನಲ್ಲಿ ಭುವನೇಶ್ವರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಜಿಲ್ಲಾ ಪ್ಯಾರಾ ಬ್ಯಾಡ್ಮಿಂಟನ್ ಸಂಸ್ಥೆಯ ಜೆ.ಬಿ. ಉಮೇಶ್, ಈ. ದೇವೇಂದ್ರಪ್ಪ, ಬಿ.ಎಂ. ಕರಿಬಸಪ್ಪ, ಎನ್.ಹೆಚ್. ಬಸವರಾಜ್, ಕಲ್ಪೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!