ಸಾಮಾಜಿಕ ಪ್ರಜ್ಞೆಯೂ ಮುಖ್ಯ
ರಾಜಕೀಯ ಪ್ರಭಾವಿಗಳೇ ಚರಂಡಿ ಮೇಲೆ ಮನೆ ಕಟ್ಟಿಕೊಳ್ಳುತ್ತಿರುವುದು ನಗರದ ದುರಂತ ಎಂದು ಹೇಳಿದ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜನರಲ್ಲಿ ಸಾಮಾಜಿಕ ಪ್ರಜ್ಞೆ ಇರಬೇಕು. ಅಧಿಕಾರಿಗಳಿಂದಲೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ದಾವಣಗೆರೆ, ಡಿ.21- ನಗರದಲ್ಲಿನ 22 ಸಾವಿರ ಬೀದಿ ದೀಪಗಳನ್ನು ತೆರವುಗೊಳಿಸಿ ಎಲ್ಇಡಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಂಡಿರುವುದಾಗಿ ಮೇಯರ್ ಎಸ್.ಟಿ. ವೀರೇಶ್ ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಇಂದು ಏರ್ಪಾಡಾಗಿದ್ದ ಪಾಲಿಕೆಯ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಎಲ್ಇಡಿ ದೀಪಗಳ ನಿರ್ವಹಣೆ ಒಂದೇ ಕಡೆ ಇರುವುದರಿಂದ ಬೆಳಿಗ್ಗೆ ಅನಗತ್ಯವಾಗಿ ದೀಪಗಳು ಉರಿಯುವುದು ತಪ್ಪಲಿದೆ ಎಂದರು.
ಸಿ.ಜಿ. ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಂಬಂಧಿಗಳಿಗೆ ತಂಗಲು ಹಾಗೂ ಆಹಾರಕ್ಕೆ ಆಸ್ಪತ್ರೆ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಖಾಲಿ ನಿವೇಶನದ ಸ್ವಚ್ಛತಾ ಹೊಣೆ ಮಾಲೀಕರದ್ದಾಗಿದ್ದು, ನಿವೇಶನ ಸ್ವಚ್ಛಗೊಳಿಸಿ ದಂಡ ವಿಧಿಸುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ ಎಂದರು.
ವಾರ್ಡ್ ಮಟ್ಟದಲ್ಲಿ ಸಮಸ್ಯೆಗಳನ್ನು ಆಲಿಸಲು ಕ್ರಮ ಕೈಗೊಳ್ಳಲಾಗುವುದು. ಪಾರ್ಕ್ಗಳ ನಿರ್ವಹಣೆಯನ್ನು ಈ ಹಿಂದೆ ಉತ್ತಮವಾಗಿ ನಿರ್ವಹಿಸಿದವರಿಗೆ ನೀಡಲಾಗಿದೆ. ಆಸಕ್ತ ಸಂಘ-ಸಂಸ್ಥೆಗಳಿಗೆ ನಿರ್ವಹಣಾ ಹೊಣೆ ವಹಿಸಲು ಅಭ್ಯಂತರವಿಲ್ಲ ಎಂದರು. ನಗರದಲ್ಲಿ 59 ಸಾವಿರ ಗಿಡಗಳನ್ನು ನೆಟ್ಟು, ನಿರ್ವಹಣೆಗಾಗಿ ಕ್ರಮವಹಿಸಲಾಗಿದೆ ಎಂದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಟಿವಿ ಸ್ಟೇಷನ್ ಕೆರೆ ಅಭಿವೃದ್ಧಿಗೆ ಸರ್ಕಾರ ಒಪ್ಪಿಗೆ ನೀಡಲಾಗಿದೆ. ನಂತರದ ಅಗತ್ಯ ಅಭಿವೃದ್ಧಿ ಕಾರ್ಯಗಳು ಪಾಲಿಕೆಯಿಂದ ನಡೆಯಲಿವೆ ಎಂದು ಭರವಸೆ ನೀಡಿದರು. ವೃತ್ತಿ ತೆರಿಗೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮೇಯರ್ ವೀರೇಶ್ ಹೇಳಿದರು.
ಕಂದಾಯ ಕಟ್ಟುವ ವ್ಯವಸ್ಥೆಯನ್ನು ಡಿಜಿಟಲೈಜೇಷನ್ ಮಾಡಲು ಕ್ರಮ ವಹಿಸಲಾಗಿದ್ದು, ಪ್ರತಿ ವಾರ್ಡ್ ಬಿಲ್ ಕಲೆಕ್ಟರ್ಗೂ ಪ್ರತ್ಯೇಕ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಬ್ಯಾಂಕ್ ಅಕೌಂಟ್ಗಳನ್ನು ಲಿಂಕ್ ಮಾಡಲಾಗಿದ್ದು, ಒಂದು ತಿಂಗಳೊಳಗೆ ಟಿಜಿಟಲ್ ಪ್ರಕ್ರಿಯೆ ಮುಗಿಯಲಿದೆ. ಕಂದಾಯ ಕಟ್ಟುವ ಪ್ರಕ್ರಿಯೆ ಸರಳವಾಗಲಿದೆ ಎಂದು ಪಾಲಿಕೆ ಮುಖ್ಯ ಆಡಳಿತಾಧಿಕಾರಿ ಪ್ರಶಾಂತ್ ನಾಯಕ್ ಹೇಳಿದರು.