ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ, ಸಣ್ಣ ಕೈಗಾರಿಕೆಗೆ ಒತ್ತು

ಮಲೇಬೆನ್ನೂರು, ಡಿ.20- ಕುಂಬಳೂರು ಬಳಿ ಇರುವ ಸಂಘದ ಜಮೀನಿನ ಭೂ ಪರಿವರ್ತನೆ ಪ್ರಕ್ರಿಯೆ ನಡೆಯುತ್ತಿದ್ದು, ಅದು ಆದ ನಂತರ ಅಲ್ಲಿ ಸಮುದಾಯ ಭವನ, ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸೇರಿದಂತೆ ಸಣ್ಣ ಕೈಗಾರಿಕೆಗಳಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್‌ ಹೇಳಿದರು.

ಇಲ್ಲಿನ ವಾಸವಿ ಕಲ್ಯಾಣ ಮಂಟಪದಲ್ಲಿ  ಇಂದು ಹಮ್ಮಿಕೊಂಡಿದ್ದ ಶಿವ ವಿವಿಧೋದ್ದೇಶ ಸಹಕಾರ ಸಂಘದ 2020-21 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹರಿಹರದಲ್ಲಿ ಸಂಘದ ಶಾಖೆ ಆರಂಭಿಸುವ ಬಗ್ಗೆ ಅವಸರದ ನಿರ್ಧಾರ ಇಲ್ಲ. ಇನ್ನೊಮ್ಮೆ ಪರಿಶೀಲನೆ ಮಾಡಿ ಎಲ್ಲರ ಸಲಹೆ ಪಡೆದು ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ ಡಾ. ಚಂದ್ರಶೇಖರ್‌ ಅವರು, ಹೊಳೆಸಿರಿಗೆರೆ ಯಲ್ಲಿ ಜಾಗ ಪಡೆದು ಶಾಖೆಗೆ ಕಟ್ಟಡ ನಿರ್ಮಿ ಸುವುದಕ್ಕೆ ಮೊದಲ ಆದ್ಯತೆ ನೀಡುತ್ತೇವೆ ಎಂದರು.

ನಮಗೆ ಸಂಘದ ಲಾಭಕ್ಕಿಂತ ಸದಸ್ಯರ ಹಿತ ಮುಖ್ಯ. ಸಂಘಕ್ಕೆ ಆಸ್ತಿ ಖರೀದಿ ಮಾಡಿ ದ್ದರಿಂದ ಲಾಭಾಂಶ ಕಡಿಮೆ ಬರುತ್ತದೆ. ಕೊರೊನಾ ಸಂಕಷ್ಟದ ನಡುವೆಯೂ ಸಂಘವು ಉತ್ತಮ ಪ್ರಗತಿ ಸಾಧಿಸಿರುವ ಬಗ್ಗೆ ತೃಪ್ತಿ ಇದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

3150 ಸದಸ್ಯರನ್ನು ಹೊಂದಿರುವ ಸಂಘವು 56,02,425 ರೂ ಪಾಲು ಧನ ಹೊಂದಿದ್ದು, 6,19,91,477 ರೂ ಠೇವಣಿ ಸಂಗ್ರಹಿಸಿದೆ. ಸದಸ್ಯರಿಗೆ ಹಾಗೂ ಗ್ರಾಹಕರಿಗೆ 6,18,95,290 ರೂ ಸಾಲ ಸೌಲಭ್ಯ ಕಲ್ಪಿಸಿದ್ದು, 2,03,94,927 ರೂ ನಿಧಿಗಳನ್ನು ಇಟ್ಟಿರುವ ಸಂಘವು ಈ ವರ್ಷ 25,24,418 ರೂ. ನಿವ್ವಳ ಲಾಭ ಗಳಿಸಿದೆ ಎಂದು ಡಾ. ಚಂದ್ರಶೇಖರ್‌ ವಿವರಿಸಿದರು.

ಸಂಘದ ಸಿವಿಲ್‌ ಇಂಜಿನಿಯರ್‌ ಆಗಿ ಬೆಣ್ಣೆಹಳ್ಳಿ ಶಿವಶಂಕರ್‌ ಅವರನ್ನು ನೇಮಕ ಮಾಡಿಕೊಳ್ಳುವ ವಿಷಯವನ್ನು ಡಾ. ಬಿ. ಚಂದ್ರಶೇಖರ್‌ ಪ್ರಸ್ತಾಪಿಸಿದಾಗ ಸಭೆ ಸಮ್ಮತಿತು. 

ಸಂಘದ ನಿರ್ದೇಶಕ ಬೆಳ್ಳೂಡಿಯ ಜಿ.ಎಸ್‌. ರವಿಶಂಕರ್‌ ಅವರು ಹರಿಹರದಲ್ಲಿ ಶಾಖೆ ಮಾಡುವ ವಿಷಯ ಪ್ರಸ್ತಾಪಿಸಿದಾಗ ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತಾದರೂ ನಂತರ ಮಾತನಾಡಿದ ಕೆಲವರು ಹರಿಹರ ದಲ್ಲಿ ಈಗಾಗಲೇ ಬಹಳ ಬ್ಯಾಂಕ್‌, ಸಹಕಾರ ಸಂಘಗಳಿವೆ. ಗ್ರಾಮೀಣ ಪ್ರದೇಶದಲ್ಲೇ ಶಾಖೆ ತೆರೆಯಿರಿ ಎಂಬ ಸಲಹೆ ಕೊಟ್ಟರು.

ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಅಮರಾವತಿ ಮಹಾದೇವಪ್ಪ ಗೌಡ್ರು, ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್‌ ಪಟೇಲ್‌, ನಂದಿ ಸೌಹಾರ್ದ ಸಹಕಾರಿ ನಿರ್ದೇಶಕ ಜಿಗಳಿ ಇಂದೂಧರ್‌, ಯಲವಟ್ಟಿಯ ಡಿ. ಯೋಮ ಕೇಶ್ವರಪ್ಪ, ನಿಟ್ಟೂರಿನ ಎನ್‌.ಜಿ. ಶಿವಾಜಿ ಪಾಟೀಲ್‌, ಬಿ.ಜಿ. ಧನಂಜಯ, ಎಕ್ಕೆಗೊಂದಿ ರುದ್ರಗೌಡ, ಪುರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್‌, ಕುಂಬಳೂರು ತೀರ್ಥಪ್ಪ, ಪಾನಿಪೂರಿ ಸಿದ್ದೇಶ್‌, ಕುಂಬಳೂರಿನ ಹನುಮೇಶ್‌ ಮಾತನಾಡಿದರು. 

ಸನ್ಮಾನಿತರಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಎನ್‌.ಜಿ. ರುದ್ರಪ್ಪ ಮಾತನಾಡಿ, ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಗತಿ ಸಾಧಿಸಿದ ಸಹಕಾರಿ ಸಂಘಗಳ ಪಟ್ಟಿಯಲ್ಲಿ ಈ ಸಂಘವು ಮೊದಲ ಸ್ಥಾನದಲ್ಲಿದೆ. ಕೊರೊನಾ ವೇಳೆ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಸಂಘದ ಹಿರಿಯ ನಿರ್ದೇಶಕರಾದ ಬಣಕಾರ ವಿರೂಪಾಕ್ಷಪ್ಪ, ಕೊಕ್ಕನೂರು ದ್ಯಾಮಣ್ಣ, ಮಹಿಳಾ ನಿರ್ದೇಶಕಿ ಶ್ರೀಮತಿ ಸರೋಜಮ್ಮ ಭರಮಗೌಡ ಮಾತನಾಡಿದರು. ಸರೋಜಮ್ಮ, ಮಂಗಳಾ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಹಾಗೂ ವಕೀಲ ಹೆಚ್‌.ಬಿ. ಶಿವಕುಮಾರ್‌ ಸ್ವಾಗತಿಸಿದರು.

ಸಂಘದ ಪ್ರಭಾರಿ ಕಾರ್ಯದರ್ಶಿ ಜಿ.ಎಂ. ನಳಿನ ಸಭೆಯ ವಿಷಯಸೂಚಿ ಓದಿದರು. ಪ್ರಥಮ ದರ್ಜೆ ಸಹಾಯಕ ಹೆಚ್‌. ಹನುಮಂತಪ್ಪ ಹಿಂದಿನ ವಾರ್ಷಿಕ ಸಭೆಯ ನಡಾವಳಿಗಳನ್ನು ಓದಿದರು. ಸಂಘದ ಉಪಾಧ್ಯಕ್ಷ ಯಲವಟ್ಟಿಯ ಜಿ. ಆಂಜನೇಯ ಅವರು ವಾರ್ಷಿಕ ವರದಿ ಓದಿದರೆ, ನಿರ್ದೇಶಕ ಹೆಚ್‌.ಬಿ. ಶಿವಕುಮಾರ್‌ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಬಿ.ಹೆಚ್‌. ವಿಜಯ್‌ ಅವರು ಲೆಕ್ಕ ಪರಿಶೋಧನಾ ವರದಿ ಓದಿದರೆ, ಜಿ.ಎಂ. ನಳಿನ ಅವರು ಹೆಚ್ಚುವರಿ ಖರ್ಚುಗಳಿಗೆ ಮಂಜೂರಾತಿ ಪಡೆದುಕೊಂಡರು.

ಕೆ.ಜಿ. ಅಕ್ಷತ ಅವರು ಅಂದಾಜು ಪತ್ರಿಕೆ ಓದಿದರು. ಸಂಘದ ನಿರ್ದೇಶಕ
ಹೆಚ್‌.ಜಿ. ಚಂದ್ರಶೇಖರ್‌ ನಿವ್ವಳ ಲಾಭ ವಿಭಾಗಣೆಗೆ ಸಭೆಯ ಒಪ್ಪಿಗೆ ಕೇಳಿದರು. ಇನ್ನೋರ್ವ ನಿರ್ದೇಶಕ ಕೆ.ಜಿ. ರಂಗನಾಥ್‌ ಅವರು ಲೆಕ್ಕ ಪರಿಶೋಧಕ ರಾಜೇಂದ್ರ ಬಾಬು ಅವರ ನೇಮಕ ಹಾಗೂ ಸಂಭಾವನೆ ವಿಷಯ ಪ್ರಸ್ತಾಪಿಸಿದರು. 

ಈ ಸಂದರ್ಭದಲ್ಲಿ ಸಾಲ ವಸೂಲಾತಿ ಮತ್ತು ಠೇವಣಿ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿದ ಪಿಗ್ಮಿ ಏಜೆಂಟ್‌ರಾದ ಬೆಳ್ಳೂಡಿಯ ಎನ್‌.ಎಸ್‌. ವಿಜಯಕುಮಾರ್‌, ಕುಂಬಳೂರಿನ ಎಸ್‌. ಮಂಜುನಾಥ್‌, ಹೊಳೆಸಿರಿಗೆರೆಯ ಕೆ. ರಾಜಶೇಖರ್‌, ರಾಜನಹಳ್ಳಿಯ ಎಸ್‌.ಆರ್‌. ಸತೀಶ್‌ ಅವರನ್ನು ಸನ್ಮಾನಿಸಲಾಯಿತು. `ಜನತಾವಾಣಿ’ ವರದಿಗಾರರೂ ಆಗಿರುವ ಸಂಘದ ನಿರ್ದೇಶಕ ಜಿಗಳಿ ಪ್ರಕಾಶ್‌ ಕಾರ್ಯಕ್ರಮ ನಿರೂಪಿಸಿದರು.

ಸಂಘದ ನಿರ್ದೇಶಕರಾದ ಸಿ. ಸುರೇಶ ಚಾರ್‌, ಸಿರಿಗೆರೆಯ ಬಿ.ಶೇಖರಪ್ಪ
ವೇದಿಕೆಯ ಲ್ಲಿದ್ದರು. ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ರೈಸ್‌ ಮಿಲ್‌ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ, ಕುಂದೂರು ಶಿವಣ್ಣ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಪ್ರಸನ್ನ ಬಣಕಾರ್‌, ನಿಟ್ಟೂರು ಏಕಾಂತಪ್ಪ, ಇ.ಎಂ. ಮರುಳಸಿದ್ದೇಶ್‌,
ವೈ. ರಂಗನಾಥ್‌, ದಾನಯ್ಯ, ಕೆ.ಜಿ.
ಕೊಟ್ರೇಶಪ್ಪ, ಕೆ.ಜಿ. ಪರಮೇಶ್ವರಪ್ಪ,
ಹುಳ್ಳಳ್ಳಿ ಸಿದ್ದೇಶ್‌, ಕೊಕ್ಕನೂರಿನ ಹೆಚ್‌. ರಂಗಪ್ಪ, ಸಿರಿಗೆರೆಯ ಮಾಗೋಡು ರವಿ ಮತ್ತಿತರರು ಭಾಗವಹಿಸಿದ್ದರು.

error: Content is protected !!