ಜಗಳೂರಿನ ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿ ಮತ್ತು ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಸಿದ್ದೇಶ್ ಮನವಿ
ಜಗಳೂರು, ಡಿ.22- ರೈತರು ಸರ್ಕಾರದ ಬಡ್ಡಿ ರಿಯಾಯಿತಿ ಸೌಲಭ್ಯ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಾಲ್ಲೂಕು ಕೃಷಿ ಮತ್ತು ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಕೆ.ಬಿ ಸಿದ್ದೇಶ್ ಮನವಿ ಮಾಡಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ 2020-21ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಸ್ತಿ ಸಾಲ ಇರುವ ರೈತರು ತಕ್ಷಣವೇ ಸಾಲ ಮರು ಪಾವತಿಸಿ ಹೊಸ ಸಾಲ ಪಡೆದುಕೊಂಡು ಸರ್ಕಾರ ನೀಡಿರುವ ಶೇಕಡಾ 3 ಬಡ್ಡಿದರದ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ರೈತರಿಗೆ 2.74 ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡಿದ್ದು, ಶೇಕಡ 67.15ರಷ್ಟು ವಸೂಲಾತಿ ಮಾಡಲಾಗಿದೆ. ಬ್ಯಾಂಕಿನ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರು ಸಹಕರಿಸಬೇಕು ಎಂದು ಅಧ್ಯಕ್ಷರು ಮನವಿ ಮಾಡಿದರು.
ಬ್ಯಾಂಕಿನ ಆರ್ಥಿಕ ಅಭಿವೃದ್ಧಿಗಾಗಿ ಬ್ಯಾಂಕಿನ ಮುಂಭಾಗದ ಆವರಣದಲ್ಲಿ ವಾಣಿಜ್ಯ ಮಳಿಗೆ ಸಂಕೀರ್ಣ ನಿರ್ಮಿ ಸಲು ಶಾಸಕ ಎಸ್.ವಿ. ರಾಮಚಂದ್ರಪ್ಪ 25 ಲಕ್ಷ ರೂಪಾಯಿ ಅನುದಾನ ನೀಡಲು ಭರವಸೆ ನೀಡಿದ್ದು, ಶೀಘ್ರದಲ್ಲಿಯೇ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ವ್ಯವಸ್ಥಾಪಕ ಎಸ್. ಸಂಗಮೇಶ್ವರ, ಉಪಾಧ್ಯಕ್ಷ ಚನ್ನಬಸಪ್ಪ, ಮಾಜಿ ಅಧ್ಯಕ್ಷ ಬಿ.ಡಿ. ಹನುಮಂತರೆಡ್ಡಿ, ಜೆ.ಎಸ್. ಮಲ್ಲಿಕಾರ್ಜುನ್ ಬಾಬು, ಎಂ.ಎಸ್. ರಾಜು ಹಾಗೂ ಸದಸ್ಯರು ಭಾಗವಹಿಸಿದ್ದರು. ಪ್ರಭಾರಿ ವ್ಯವಸ್ಥಾಪಕ ಟಿಎನ್ ಭೂಷಣ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.