`ಗೂಗಲಿಸಂ’ನಿಂದ ಹೊರಬನ್ನಿ

`ಗುರುಚೇತನ’ ಹಾಗೂ `ಗುರುಶ್ರೇಷ್ಠ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಕರಿಗೆ ವಿಶ್ರಾಂತ ಕುಲಸಚಿವ ಪ್ರೊ.ಬಿ.ಬಕ್ಕಪ್ಪ ಸಲಹೆ

ದಾವಣಗೆರೆ, ಡಿ.20- ಶಿಕ್ಷಕರು `ಗೂಗಲಿಸಂ’ ನಿಂದ ಹೊರ ಬರಬೇಕು. ವಿಮರ್ಶಾತ್ಮಕ ಚಿಂತನೆ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ವಿಶ್ರಾಂತ ಕುಲಸಚಿವ ಪ್ರೊ.ಬಿ. ಬಕ್ಕಪ್ಪ ಸಲಹೆ ನೀಡಿದರು.

ಶಿಕ್ಷಣ ತಜ್ಞ ಡಾ.ಹೆಚ್.ವಿ. ವಾಮದೇವಪ್ಪ ಚಾರಿಟಬಲ್ ಮತ್ತು ಎಜುಕೇಷನಲ್ ಟ್ರಸ್ಟ್‌ನಿಂದ ನಗರದ ಮಾಗನೂರು ಬಸಪ್ಪ ಶಾಲಾ ಸಭಾಂಗಣದಲ್ಲಿ ಕಳೆದ ವಾರ ಹಮ್ಮಿಕೊಳ್ಳಲಾಗಿದ್ದ `ಗುರುಚೇತನ’ ಹಾಗೂ `ಗುರುಶ್ರೇಷ್ಠ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೂಗಲ್‌ನಲ್ಲಿ ದೊರೆಯುವ ಮಾಹಿತಿ ಎಲ್ಲವೂ ಸತ್ಯವೆಂದು ಸ್ವೀಕರಿಸುವ ಮನೋಭಾವ ಕಡಿಮೆ ಯಾಗಬೇಕು. ವಿಷಯಗಳನ್ನು ವಿಮರ್ಶೆಗೊಳಪಡಿ ಸಬೇಕು ಎಂದು ಕಿವಿ ಮಾತು ಹೇಳಿದರು.

ತಂತ್ರಜ್ಞಾನದ ಬೆಳವಣಿಗೆಯನ್ನು ಗುರುತಿಸಿ ಅಳವಡಿಸಿಕೊಂಡಾಗ ಯಶಸ್ವಿ ಶಿಕ್ಷಕರಾಗಲು ಸಾಧ್ಯವಿದೆ. ಮಾನವೀಯತೆ, ವೈಚಾರಿಕತೆ ಮತ್ತು ಅನುಭವವಾದದ ಮೂಲಕ ಶಿಕ್ಷಣಕ್ಕೆ ಹೊಸ ಕಲ್ಪನೆ ಕೊಟ್ಟಾಗ ವ್ಯಕ್ತಿ, ಸಮಾಜ ಹಾಗೂ ದೇಶದ ಪ್ರಗತಿ ಸಾಧ್ಯ ಎಂದು ಪ್ರತಿಪಾದಿಸಿದರು.

ಮಕ್ಕಳಲ್ಲಿ ಸೃಜನಶೀಲತೆ ಗುಣ ಬೆಳೆಸಿದಾಗ ದೇಶ ಪ್ರಗತಿಯತ್ತ ಸಾಗುತ್ತದೆ. ಇತ್ತೀಚಿನ ವರದಿ ಪ್ರಕಾರ ಭಾರತ ಜನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಹಿಂದುಳಿದಿದೆ. ವಿದ್ಯಾರ್ಥಿಗಳಲ್ಲಿ ಚಿಂತನಾ ಶಕ್ತಿ ಬೆಳೆಸದೆ ಸುಮ್ಮನೆ ಒಪ್ಪಿಕೊಳ್ಳುವ ಮನೋಭಾವ ಬೆಳೆಸುತ್ತಿರುವುದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಿಸಿದರು.

ಮಾನವೀಯ ಮೌಲ್ಯಗಳು ಮರೆಯಾದ ಪರಿಣಾಮ ಹೆತ್ತವರನ್ನೂ ನೋಡಿಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಹೇಗಾದರೂ ಸರಿ ಬದುಕಿದರೆ ಸಾಕು ಎಂಬ ಮನೋಭಾವ ಬಿಟ್ಟು ತಪ್ಪು ಹಾಗೂ ಸರಿಗಳನ್ನು ಗುರುತಿಸಿ ಸರಿಯಾದ ದಾರಿಯಲ್ಲಿ ನಡೆಯಬೇಕು ಎಂದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜು ಪ್ರಾಚಾರ್ಯರಾದ ಡಾ.ಪ್ರಭಾ ಎಸ್.ಗುಡ್ಡದಾನೇಶ್ವರಿ ಅವರಿಗೆ ಗುರುಚೇತನ ಪ್ರಶಸ್ತಿಯನ್ನು ಹಾಗೂ ಹೊನ್ನಾಳಿ ತಾಲ್ಲೂಕು ಟಿ.ಗೋಪಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಕೆ.ಎಸ್. ರಾಮಚಂದ್ರ ಅವರಿಗೆ ಗುರುಶ್ರೇಷ್ಠ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

`ಗುರುಚೇತನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಪ್ರಭಾ ಎಸ್.ಗುಡ್ಡದಾನೇಶ್ವರಿ, ಸಮಾಜಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಇರುತ್ತದೆ. ಶಿಕ್ಷಕರು ಕೆಟ್ಟದ್ದರ ಬಳಿಗೆ ಹೋಗುವ ನೊಣಗಳಾಗದೆ, ಒಳ್ಳೆಯದನ್ನು ಸ್ವೀಕರಿಸುವ ಜೇನು ನೊಣಗಳಂತಾಗಬೇಕು ಎಂದು ಹೇಳಿದರು.

ವಿಶ್ವದಲ್ಲಿನ ಬದಲಾವಣೆಗಳ ಬಗ್ಗೆ ಸದಾ ಕುತೂಹಲಿಗಳಾಗಿರಬೇಕು. ನಡೆ ಹಾಗೂ ನುಡಿಯಲ್ಲಿ ಸಂಸ್ಕೃತಿ, ಸಂಸ್ಕಾರ ಇರಬೇಕು. ನುಡಿದಂತೆ ನಡೆದಾಗ ಮಾತ್ರ ನಮ್ಮನ್ನು ಸಮಾಜ ಗುರುತಿಸಲು ಸಾಧ್ಯವಾಗುತ್ತದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ದಾವಿವಿ ಸಹ ಪ್ರಾಧ್ಯಾಪ ಕರುಗಳಾದ ಡಾ.ಬಿ.ಸಿ. ಪ್ರಸನ್ನಕುಮಾರ್ ಹಾಗೂ ಡಿ.ಜಿ. ಪ್ರಕಾಶ್ ಅವರಿಗೆ ಅಭಿನಂದಿಸಲಾಯಿತು.  ಟ್ರಸ್ಟ್‌ನ ಸಂಸ್ಥಾಪಕ ಡಾ.ಹೆಚ್.ವಿ. ವಾಮದೇವಪ್ಪ, ಅಧ್ಯಕ್ಷ ಪ್ರೊ.ಹೆಚ್.ಎಸ್. ಶಾಂತವೀರಪ್ಪ, ಮಾಗ ನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಬಿ. ಸಂಗಮೇಶಗೌಡರು, ಸಹಾಯಕ ಪ್ರಾಧ್ಯಾ ಪಕ ಧನಂಜಯ್   ಇತರರು ಉಪಸ್ಥಿತರಿದ್ದರು.

ಡಾ.ಬಸವರಾಜ ಸೋಮನಹಳ್ಳಿ ಸ್ವಾಗತಿಸಿದರು. ಕು. ಅನುಷಾ ಪ್ರಾರ್ಥಿಸಿದರು. ಶ್ರೀಮತಿ ಆಶಾ ಜಿ.ಹೆಚ್. ನಿರೂಪಿಸಿದರು. ಎಸ್.ಎಸ್.ಎಂ.ಬಿ. ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಅನಿತಾ ಜಿ. ವಂದಿಸಿದರು.

error: Content is protected !!