ದಾವಣಗೆರೆ, ಡಿ.20- ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ಮೂಲಕ ತರಗತಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಠ ನಡೆಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಗರದಲ್ಲಿ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸರ್ಕಾರಿ ಪದವಿ ಕಾಲೇಜಿನಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು, ಎಬಿವಿಪಿ ಕಾರ್ಯಕರ್ತರು ಗುಂಡಿ ಮಹಾದೇವಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕೊರೊನಾ ಕಾರಣಕ್ಕೆ ಬಂದ್ ಆಗಿದ್ದ ಕಾಲೇಜುಗಳು ಈಗ ಕೊರೊನಾ ಅಟ್ಟಹಾಸ ಕ್ಷೀಣಿಸಿರುವ ಕಾರಣ ಈಗ ಕಾಲೇಜುಗಳು ಆರಂಭವಾಗಿ, ಭೌತಿಕ ತರಗತಿಗಳು ನಡೆಯುತ್ತಿವೆ. ಆದರೆ, ಅತಿಥಿ ಉಪನ್ಯಾಸಕರುಗಳು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತರಗತಿ ಬಹಿಷ್ಕರಿಸಿರುವುದರಿಂದ ಪಾಠ-ಪ್ರವಚನ ನಡೆಯದೇ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ದೊಡ್ಡೇಶ, ಮಂಜುನಾಥ್, ಕುಮಾರ್, ವಿಶ್ವಾಸ್, ದೀಪಾ, ಜ್ಯೋತಿ ಸೇರಿದಂತೆ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.