ಪರಿಸರ ರಕ್ಷಣೆಯಿಂದ ಗ್ರಾಮಗಳ ಉದ್ಧಾರ ಸಾಧ್ಯ

ಕೋಲ್ಕಂಟೆ ಗ್ರಾಮದ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ನಟ ಶರತ್ ಲೋಹಿತಾಶ್ವ

ದಾವಣಗೆರೆ, ಡಿ. 20 – ಗ್ರಾಮಗಳ ಉದ್ಧಾರವಾಗಬೇಕು. ಮಹಿಳೆಯರು ಸುರಕ್ಷಿತವಾಗಿ ಬಾಳುವ ಪರಿಸರ ನಿರ್ಮಾಣವಾಗಬೇಕು. ಆಗ ದೇಶ ಅಭಿವೃದ್ಧಿಯಾಗುತ್ತದೆ ಎಂದು ನಟ ಶರತ್ ಲೋಹಿತಾಶ್ವ ಹೇಳಿದರು.

ಕೋಲ್ಕುಂಟೆ ಗ್ರಾಮಾಭ್ಯುದ್ಯಯ ಸಂಘ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಹಯೋಗದಲ್ಲಿ ತಾಲ್ಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಭಾನುವಾರ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನಗೊಳಿಸಲಾದ ಕೆರೆ ಹಸ್ತಾಂತರ ಹಾಗೂ ವಿವಿಧೋದ್ದೇಶ ಸಮುಚ್ಛಯ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಕೋಲ್ಕುಂಟೆ ಗ್ರಾಮಾಭ್ಯುದ್ಯಯ ಸಂಘದ ಗೌರವಾಧ್ಯಕ್ಷ ಸುಚೇಂದ್ರ ಪ್ರಸಾದ್, ನನ್ನ ತಾಯಿ ಹಾಗೂ ತಾತನ ಊರಾದ ಕೋಲ್ಕುಂಟೆಯನ್ನು ಮಾದರಿ ಗ್ರಾಮವನ್ನಾಗಿ ಮಾಡುವ ದೃಢ ಸಂಕಲ್ಪ ಹೊಂದಿದ್ದು, ಸಮಸ್ತ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಇಚ್ಛಾ  ಶಕ್ತಿ ಪ್ರದರ್ಶಿಸಬೇಕು ಎಂದು ಕೋರಿದರು.

ತಹಶೀಲ್ದಾರ್ ಬಿ.ಎನ್.ಗಿರೀಶ್, ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 53 ಕೆರೆಗಳಿದ್ದು, ಎಲ್ಲ ಕೆರೆಗಳನ್ನು ಇದೇ ಮೊದಲ ಬಾರಿಗೆ ಸಮೀಕ್ಷೆ ಮಾಡಿಸಲಾಗಿದ್ದು, ಇದರಲ್ಲಿ 17 ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಿರ್ದೇಶಕ ಜಯಂತ್ ಪೂಜಾರಿ, ಮಾಜಿ ಶಾಸಕ ಬಸವರಾಜನಾಯ್ಕ, ಬಹುಭಾಷಾ ಚಿತ್ರ ನಿರ್ಮಾತೃ ರಾಜಶೇಖರ್, ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ. ಜೀವನಮೂರ್ತಿ, ಆರ್.ಆರ್.ರಮೇಶ್‍ಬಾಬು ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಶ್ಯಾಗಲೆ, ಕುರ್ಕಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್. ಕೊಟ್ರಪ್ಪ, ಕೈದಾಳೆ ಗ್ರಾಮ ಪಂಚಾಯಿತಿ ಪಿಡಿಒ ವಿದ್ಯಾವತಿ, ಹದಡಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಸಿ.ನಿಂಗಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಮೀನಾ ಶ್ರೀನಿವಾಸ್, ಮಾನವ ಕಂಪ್ಯೂಟರ್ ಬಸವರಾಜ್ ಉಮ್ರಾಣಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಶಾ ಬಸವರಾಜ್, ಕೋಲ್ಕುಂಟೆ ಗಾಮಾಭ್ಯುದ್ಯಯ ಸಂಘದ ಅಧ್ಯಕ್ಷ ಕೆ.ಜಿ. ಮಂಜುನಾಥ್, ರಂಗಕರ್ಮಿ ಬಾ.ಮ. ಬಸವರಾಜಯ್ಯ ಉಪಸ್ಥಿತರಿದ್ದರು.

ಎಸ್. ಲೋಕೇಶಪ್ಪ ಸ್ವಾಗತಿಸಿದರು. ಶಿಕ್ಷಕ ವೀರೇಶ್ ನಿರೂಪಿಸಿದರು.

error: Content is protected !!