ಹರಿಹರ, ಡಿ.20- ಬೆಳಗಾವಿಯ ಎಂ.ಇ.ಎಸ್. ಪುಂಡರು ಗೂಂಡಾಗಳ ರೀತಿಯಲ್ಲಿ ಕೃತ್ಯಗಳನ್ನು ಮಾಡಿ, ಕನ್ನಡಿಗರ ಮತ್ತು ಮರಾಠಿಗರ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಕನ್ನಡ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಒತ್ತಾಯಿಸಿದ್ದಾರೆ.
ಬೆಳಗಾವಿಗೆ ಹೋಗುತ್ತಿರುವ ವೇಳೆ ನಗರದ ಗಾಂಧಿ ವೃತ್ತದಲ್ಲಿ ನಗರದ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿ, ಕನ್ನಡದ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ಹೊಡೆಯುವ ಮೂಲಕ ಕನ್ನಡಿಗರ ಮೇಲೆ ದಾಳಿ ಮಾಡುತ್ತಿರುವುದು ಖಂಡನಿಯ. ಕನ್ನಡಿಗರು ಮತ್ತು ಮರಾಠಿಗರಲ್ಲಿ ಒಳ್ಳೆಯ ಬಾಂಧವ್ಯ ಇದೆ. ಆದರೆ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಬೆಂಕಿ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದವರು ದೂರಿದರು.
ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸಂಸದರು ಸೋನಿಯಾ ಗಾಂಧಿ ಯವರ ಬಳಿ ಮಾತನಾಡಿ, ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿ ರುವ ಕಾಂಗ್ರೆಸ್ ಬೆಂಬಲವನ್ನು ವಾಪಾಸ್ ಪಡೆ ಯುವಂತೆ ಹೇಳಬೇಕು ಎಂದೂ ಅವರು ಒತ್ತಾಯಿಸಿದರು.
ನಾವು ಶಿವಾಜಿ ವಿರೋಧಿಗಳಲ್ಲ. ಆದರೆ, ಶಿವಾಜಿ ಮುಂದೆ ಇಟ್ಟುಕೊಂಡು ಎಂಇಎಸ್ ಕನ್ನಡಿಗರ ಮೇಲೆ ಸವಾರಿ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವು ದಿಲ್ಲ. ಬೆಳಗಾವಿ ನಗರದಲ್ಲಿ ಕನ್ನಡಿಗರ ಮೇಲೆ ದಿನನಿತ್ಯ ದಬ್ಬಾಳಿಕೆ ನಡೆಯುತ್ತದೆ. ಇದಕ್ಕೆ ಸರ್ಕಾರ ಶಾಶ್ವತ ಕಡಿವಾಣ ಹಾಕಬೇಕು ಎಂದವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ನಾಗರಾಜ್ ಜಮ್ಮನಳ್ಳಿ, ತಾಲ್ಲೂಕು ಅಧ್ಯಕ್ಷ ರಮೇಶ್ ಮಾನೆ, ಕಾರ್ಯಾಧ್ಯಕ್ಷ ಪ್ರೀತಂಬಾಬು, ಗೌರವ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್, ಯಮನೂರು ಮತ್ತಿತರರು ಉಪಸ್ಥಿತರಿದ್ದರು.