ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಾಗೃತಿ ಬೈಕ್ ರಾಲಿ

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಾಗೃತಿ ಬೈಕ್ ರಾಲಿ

ದಾವಣಗೆರೆ, ಡಿ. 19 – ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳು, ಅಲ್ಲದೆ ಸಾಮಾಜಿಕ ಪಿಡುಗುಗಳ ಕುರಿತು ಜನ ಜಾಗೃತಿ, ಸಂಚಾರ ನಿಯಮಗಳು ಹಾಗೂ ಕೋವಿಡ್ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಎಸ್‍ಪಿ ರಿಷ್ಯಂತ್ ಸಿ.ಬಿ. ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ದಾವಣಗೆರೆಯಿಂದ, ಸಂತೆಬೆನ್ನೂರು ಮಾರ್ಗವಾಗಿ, ಸೂಳೆಕೆರೆ ವರೆಗೆ ಬೈಕ್ ರಾಲಿ ನಡೆಸಿದೆ.

ಜಿಲ್ಲಾ ಪಂಚಾಯತ್ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ನೇತೃತ್ವದ  ಅಧಿಕಾರಿಗಳ ತಂಡ ರಾಲಿ ನಡೆಸಿದೆ.

ಜಿಲ್ಲಾಧಿಕಾರಿಗಳು ತಮ್ಮ ಬೈಕ್‍ಗೆ ‘ಕೋವಿಡ್ ನಿಯಂತ್ರಣ ಕುರಿತು, ತಪ್ಪದೇ ಲಸಿಕೆ ಪಡೆಯುವಂತೆ ಕೋರುವ ಸಂದೇಶವುಳ್ಳ ಫಲಕವನ್ನು ಅಳವಡಿಸಿ ಕೊಂಡರೆ, ಎಸ್‍ಪಿ ಸಿ.ಬಿ. ರಿಷ್ಯಂತ್ ಅವರು ಅಪರಾಧ ತಡೆ ಮಾಸಾಚರಣೆ ನಿಮಿತ್ತ, ‘ಹೆಲ್ಮೆಟ್ ಬಳಸಿ ಚಾಲನೆ ಮಾಡಿ’, ಅಪರಾಧ ಮುಕ್ತ ಸಮಾಜ ನಿರ್ಮಿಸೋಣ ಬನ್ನಿ’ ಎಂಬ ಸಂದೇಶವುಳ್ಳ ಫಲಕ.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ ಕುಮಾರ್ ಅವರು ‘ಮಕ್ಕಳ ಸಹಾಯವಾಣಿ 1098’ ಕುರಿತು, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ಅವರು, ಬಾಲ ಕಾರ್ಮಿಕ ಪದ್ದತಿ ವಿರೋಧದ ಬಗೆಗಿನ ಸಂದೇಶವುಳ್ಳ ಫಲಕ, ಆರ್‌ಟಿಒ ಶ್ರೀಧರ್ ಮಲ್ಲಾಡ್ ಅವರು ಕೂಡ ರಸ್ತೆ ಸುರಕ್ಷತೆ ಸಪ್ತಾಹ ಕುರಿತು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗಂಗಪ್ಪ ಅವರು ಕೋವಿಡ್ ನಿಯಂತ್ರಣ ಕುರಿತ ಜಾಗೃತಿ ಫಲಕಗಳನ್ನು ತಮ್ಮ ಬೈಕ್‍ಗೆ ಅಳವಡಿಸಿಕೊಂಡಿದ್ದರು. 

ಜಿಲ್ಲಾ ಪಂಚಾಯತ್ ಆವರಣದಿಂದ ಹೊರಟ ಅಧಿಕಾರಿಗಳ ಬೈಕ್ ರಾಲಿ ಸಂತೇಬೆನ್ನೂರಿನ ಐತಿಹಾಸಿಕ ಪುಷ್ಕರಣಿಗೆ ಭೇಟಿ ನೀಡಿತು. ನಂತರ ಸೂಳೆಕೆರೆ ಬಳಿಯ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಮಾಡುವ ಮೂಲಕ ಜಾಥಾ ಪೂರ್ಣಗೊಳಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ ನಾಯಕ್,  ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಬೈಕ್ ರಾಲಿಯಲ್ಲಿ ಪಾಲ್ಗೊಂಡಿದ್ದರು.

error: Content is protected !!