ಬಸವೇಶ್ವರ ದತ್ತಾವಧೂತರು
ಹೊನ್ನಾಳಿ, ಡಿ.19- ನಮ್ಮ ಮಕ್ಕಳಿಗೆ ಧರ್ಮ, ಸಂಸ್ಕೃತಿ ಕುರಿತು ಸಕಾಲದಲ್ಲಿ ಸೂಕ್ತ ತಿಳಿವಳಿಕೆ ನೀಡಬೇ ಕಾದ ಮಹತ್ತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಇಲ್ಲಿನ ಹೊಸಕೇರಿಯ ಸದ್ಗುರು ದತ್ತಾಶ್ರಮದ ಶ್ರೀ ಶಿವಗುರು ಬಸವೇಶ್ವರ ದತ್ತಾವಧೂತರು ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಎದುರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ದತ್ತ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿ ಉಳಿಸಿ-ಬೆಳೆಸುವತ್ತ ನಾವೆಲ್ಲರೂ ಚಿಂತಿಸಬೇಕು. ಹಾಗಾಗಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ನಮ್ಮ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸಬೇಕು ಎಂದು ತಿಳಿಸಿದರು.
ನಮ್ಮಲ್ಲಿ ಒಳ್ಳೆಯತನ ಇದ್ದರೆ ಬೇರೆಯವರಿಂದಲೂ ಒಳಿತಾಗುತ್ತದೆ. ಗುರು-ಹಿರಿಯರಿಗೆ ಗೌರವ ನೀಡುವ ಭಾವನೆ ಬೆಳೆಸಿಕೊಳ್ಳಬೇಕು. ಜ್ಞಾನಿಗಳಾಗುವ ನಿಟ್ಟಿನಲ್ಲಿ ನಾವು ಚಿಂತನೆ ನಡೆಸಬೇಕು ಎಂದು ಹೇಳಿದರು.
ಹೊನ್ನಾಳಿ ಪಟ್ಟಣದ ಹೊಸಕೇರಿಯ ಸದ್ಗುರು ದತ್ತಾಶ್ರಮಕ್ಕೆ ಸ್ವಂತ ಕಟ್ಟಡವಿಲ್ಲ. ಮುಂದಿನ ದಿನಗಳಲ್ಲಿ ಹೊನ್ನಾಳಿಗೆ ಸಮೀಪದ ಸ್ಥಳದಲ್ಲೇ ಆಶ್ರಮದ ಸ್ವಂತ ಕಟ್ಟಡ ನಿರ್ಮಿಸುವ ಯೋಜನೆ ಇದೆ. ನಾವು ನಮ್ಮ ಶ್ರಮದ ದುಡಿಮೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ನಮ್ಮ ಆಶ್ರಮದ ಭಕ್ತರೇ ನಮ್ಮ ಆಸ್ತಿ. ಹಾಗಾಗಿ, ಇನ್ನೂ ಹತ್ತು ವರ್ಷಗಳಾದರೂ ಚಿಂತೆಯಿಲ್ಲ. ಶ್ರಮದ ದುಡಿಮೆಯ ಹಣದಲ್ಲೇ ಆಶ್ರಮದ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹಿರೇಮಠದ ಬಸವರಾಜಪ್ಪ ಮಾತನಾಡಿ, ಹಿರಿಯ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಹೋರಾಟದಿಂದಾಗಿ ರೈತರಿಗೆ ಸರ್ಕಾರದ ಸವಲತ್ತುಗಳು ನ್ಯಾಯಯುತವಾಗಿ ಲಭಿಸುತ್ತಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಒಡೆದು ಆಳುವ ನೀತಿಯಿಂದಾಗಿ ರೈತ ಕುಲ ಹೀನಸ್ಥಿತಿ ತಲುಪಿದೆ ಎಂದರು.
ಹೊನ್ನಾಳಿಯ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಾಕುಮಾರಿ ಜ್ಯೋತಿ ಮಾತನಾಡಿ, ಧಾರ್ಮಿಕ ಆಚರಣೆಗಳು ನಮ್ಮ ಇಹ-ಪರದ ಉದ್ಧಾರಕ್ಕಿರುವ ಸುಲಭ ಮಾರ್ಗಗಳು. ಹಾಗಾಗಿ, ಎಲ್ಲರೂ ಧರ್ಮ ಮಾರ್ಗದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕೆಂದರು.
ಭದ್ರಾವತಿಯ ಅಶ್ವತ್ಥಕಟ್ಟೆ ಧರ್ಮಸ್ಥಳ
ಪಾದಯಾತ್ರೆ ಸೇವಾ ಸಮಿತಿಯ ಅಧ್ಯಕ್ಷ ಎಸ್. ಸಂಪತ್ಕುಮಾರ್, ರಟ್ಟೇಹಳ್ಳಿ ತಾಲ್ಲೂಕು ಮೇದೂರಿನ ಗುರುಸ್ವಾಮೀಜಿ ಚನ್ನಬಸಪ್ಪರೆಡ್ಡಿ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ತಾಲ್ಲೂಕು ಅಧ್ಯಕ್ಷ ಬೇಲಿಮಲ್ಲೂರು ಎನ್. ಸಿದ್ದಪ್ಪ, ನಿವೃತ್ತ ಪ್ರಾಂಶುಪಾಲ ಮಂಜಪ್ಪ, ಹೊಳೆಹರಳಹಳ್ಳಿ ಗ್ರಾಮದ ಶ್ರೀ ಸದ್ಗುರು ದತ್ತಾಶ್ರಮದ ಅಧ್ಯಕ್ಷ ಎಚ್.ಎಲ್. ಬಸವರಾಜ್, ಎಚ್.ಎಸ್. ಮಲ್ಲಪ್ಪ, ಕತ್ತಿಗೆ ಮಂಜಪ್ಪ, ಡಿ. ಲೋಕೇಶ್ ಇತರರು ಮಾತನಾಡಿದರು.
ಗಿರೀಶ್, ಹೊಸಕೇರಿ ಯೋಗೀಶ್, ರಘು, ಪೇಟೆ ವಿಜಯಕುಮಾರ್ ಪಾಟೀಲ್ ಇತರರು ಇದ್ದರು. ಜಾನುವಾರು ನಾಟಿ ವೈದ್ಯರಾದ ಕತ್ತಿಗೆ ಪುಟ್ಟಮಲ್ಲಪ್ಪ, ಗೋವಿನಕೋವಿ ಜವಾನ್ ನಿಂಗಪ್ಪ ದಂಪತಿಯನ್ನು ಹಾಗೂ ಕಾರ್ಯಕ್ರಮದ ಸೇವಾರ್ಥಿಗಳನ್ನು ಶ್ರೀ ಶಿವಗುರು ಬಸವೇಶ್ವರ ದತ್ತಾವಧೂತರು ಸನ್ಮಾನಿಸಿದರು.