ದಾವಣಗೆರೆ, ಡಿ.17- ಮಹಾ ನಗರ ಪಾಲಿಕೆ ಆಡಳಿತದ ವಿರುದ್ಧ ವಿಪಕ್ಷ ನಾಯಕ ಎ. ನಾಗರಾಜ್ ಹಾಗೂ ಕಾಂಗ್ರೆಸ್ ಸದಸ್ಯರು ಮಾಡಿರುವ ಆರೋಪ ನಿರಾಧಾರ ಎಂದು ಉಪಮೇಯರ್ ಶಿಲ್ಪಾ ಜಯ ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ಬಿಜೆಪಿ ಆಡಳಿತದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುವ ಸಲುವಾಗಿ ಕಾಂಗ್ರೆಸ್ ಪಾಲಿಕೆ ಸದಸ್ಯರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಮತ್ತು ಚುನಾವಣಾ ನೀತಿ ಸಂಹಿತೆ ಇದ್ದಾಗ ಪಾಲಿಕೆ ಸಾಮಾನ್ಯ ಸಭೆ ನಡೆಸಲು ಸಾಧ್ಯವಾಗಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್‌ನವರು ವರ್ಷಕ್ಕೆ ಕೇವಲ ಎರಡು ಅಥವಾ ಮೂರು ಸಭೆಗಳನ್ನು ನಡೆಸಿದ್ದಾರೆ. ಈ ಬಗ್ಗೆ ದಾಖಲೆ ಕೂಡ ಇವೆ. ಹೀಗಾಗಿ ಕಾಂಗ್ರೆಸ್‌ನವರಿಗೆ ಆರೋಪ ಮಾಡಲು ಯಾವುದೇ ನೈತಿಕತೆ ಇಲ್ಲ ಎಂದು ಪ್ರತ್ಯಾರೋಪ ಮಾಡಿದರು.
ಆರೋಪ ಸಾಬೀತಾದರೆ ಕ್ರಮಕ್ಕೆ ಶಿಫಾರಸ್ಸು: ಪಾಲಿಕೆಯಲ್ಲಿ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಅವರು, ಲಂಚದ ಕುರಿತಂತೆ ಸಾರ್ವಜನಿಕರು ಆಧಾರ ಸಹಿತ ದೂರು ಸಲ್ಲಿಸಿದರೆ ಕ್ರಮಕೈಗೊಳ್ಳುವ ಜೊತೆಗೆ ಆಂತರಿಕ ತನಿಖೆಯನ್ನೂ ಸಹ ಮಾಡಲಾಗುವುದು ಎಂದರು.
ಆಯುಕ್ತರೇ ಲಂಚದ ಬೇಡಿಕೆ ಇಟ್ಟಿರುವ ಬಗ್ಗೆ ಸಾಕ್ಷಿ ಸಿಕ್ಕರೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳು ವಿಳಂಬವಾಗಿಲ್ಲ. ಮೇಯರ್ ಎಸ್.ಟಿ. ವೀರೇಶ್ ಅವಧಿಯಲ್ಲಿ 313 ಕಾಮಗಾರಿಗಳು ನಡೆಯುತ್ತಿವೆ. ಎವಿಕೆ ಕಾಲೇಜು ರಸ್ತೆಯ ಬೀದಿ ದೀಪಗಳ ನಿರ್ವಹಣೆ ಇನ್ನೂ ಹಸ್ತಾಂತರವಾಗಿಲ್ಲ. ಇನ್ನೂ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನದ ವ್ಯವಸ್ಥೆ ಮಾಡಲು ಪಾಲಿಕೆಯ ಸಭೆಯಲ್ಲಿ ಬಹುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ವಾಹನಗಳು ಸಾರ್ವಜನಿಕರ ಸೇವೆ ಸದ್ಬಳಕೆಯಾಗುತ್ತಿವೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಎಲ್.ಡಿ. ಗೋಣೆಪ್ಪ, ಗೀತಾ ದಿಳ್ಳೆಪ್ಪ, ರೇಣುಕಾ ಶ್ರೀನಿವಾಸ್, ಗೌರಮ್ಮ ನರೇಂದ್ರಕುಮಾರ್, ರೇಖಾ ಸುರೇಶ್, ಗಾಯತ್ರಿಬಾಯಿ ಮತ್ತಿತರರಿದ್ದರು.