ಮೊರಾರ್ಜಿ ವಸತಿ ಶಾಲೆಯಲ್ಲಿ ಘಟನೆ
ಸ್ವಚ್ಛತೆ ಇಲ್ಲದ ಬಗ್ಗೆ ಪೋಷಕರ ಆಕ್ರೋಶ
ಜಗಳೂರು, ಡಿ.17- ಪಟ್ಟಣದ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ಬಾಲಕ-ಬಾಲಕಿಯರ ವಸತಿ ಶಾಲೆಯಲ್ಲಿ ವಿಷಾಹಾರ ಸೇವನೆಯಿಂದ 45 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ನಿನ್ನೆ ರಾತ್ರಿ ವೇಳೆ ತಯಾರಿಸಿದ ಅನ್ನ ಸರಿಯಾಗಿ ಬೇಯಿಸಿಲ್ಲ. ಅಲ್ಲದೆ ಬೆಳಿಗ್ಗೆ ಚಿತ್ರಾನ್ನ ತಿಂಡಿ ತಯಾರಿಸಿದ್ದರು. ಅದೂ ಕೂಡ ಸರಿಯಾಗಿ ಬೇಯಿಸದೇ ರುಚಿಯಿರದ ಕಾರಣ ಪುನಃ ಅವಲಕ್ಕಿ ತಯಾರಿಸಿ ಮಕ್ಕಳಿಗೆ ವಿತರಿಸಲಾಗಿತ್ತು ಎನ್ನಲಾಗಿದೆ.
ಆಹಾರ ಸೇವನೆ ಮಾಡಿದ್ದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 42 ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗಿ ವಾಂತಿ, ಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಮಕ್ಕಳು ಚೇತರಿಸಿ ಕೊಂಡಿ ದ್ದಾರೆ. ಅಡುಗೆ ಸಿಬ್ಬಂದಿ ಹಾಗೂ ಪ್ರಾಂಶು ಪಾಲರ ನಿರ್ಲಕ್ಷ್ಯತನದಿಂದಾಗಿ ಮಕ್ಕಳು ತೊಂದರೆಗೀಡಾಗಿದ್ದಾರೆ. ಸ್ವಚ್ಛತೆ ಕಾಪಾ ಡುವುದಿಲ್ಲ. ಪ್ರತಿನಿತ್ಯವೂ ಇದೇ ಗೋಳಾಗಿದೆ. ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನೀರಜ್, ತಾಲ್ಲೂಕು ವೈದ್ಯಾದಿಕಾರಿ ಡಾ.ನಾಗರಾಜ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡ ಮಕ್ಕಳಿಗೆ ತಕ್ಷಣವೇ ಚಿಕಿತ್ಸೆ ನೀಡಿದೆ.
ಜಿಲ್ಲಾ ಮಟ್ಟದ ಅಧಿಕಾರಿಗಳ ದಂಡು: ಸುದ್ದಿ ತಿಳಿಯುತ್ತಿದ್ದಂತೆ ಬಿಸಿಎಂ ಇಲಾಖೆ ಜಿಲ್ಲಾ ವಿಸ್ತರಣಾಧಿಕಾರಿ ಗಂಗಪ್ಪ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ವಿಜಯ್ ಕುಮಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಮಿತ್ ಬಿದರಿ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಮಕ್ಕಳ ಆರೋಗ್ಯ ಸ್ಥಿತಿ ವಿಚಾರಿಸಿ ನಂತರ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಅಡುಗೆ ಸಹಾಯಕರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳಿಗೆ ತರಾಟೆ ತೆಗದುಕೊಂಡರು.
ಆಹಾರ ರುಚಿಯಾಗಿರುವುದಿಲ್ಲ. ಸ್ವಚ್ಛತೆ ಇಲ್ಲ. ಸರಿಯಾಗಿ ಬೇಯಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.
ಶಾಸಕ ಎಸ್.ವಿ. ರಾಮಚಂದ್ರ ಸಾಂತ್ವನ: ಬಿಳಗಾವಿ ಅಧಿವೇಶನದಲ್ಲಿ ಭಾಗವಹಿಸಿರುವ ಶಾಸಕ ಎಸ್.ವಿ. ರಾಮಚಂದ್ರ, ಪೋಷಕರು ಮತ್ತು ವಿದ್ಯಾರ್ಥಿನಿಯರು ಆತಂಕ ಪಡುವುದುಬೇಡ. ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡಲು ಶ್ರಮಿಸಿದೆ. ಘಟನೆಯ ಬಗ್ಗೆ ಸಮಗ್ರ ಮಾಹಿತಿ ಪಡೆದು, ಸೂಕ್ತ ಕ್ರಮ ಕೈ ಗೊಳ್ಳಲಾಗುವುದು ಎಂದು ದೂರವಾಣಿಯಲ್ಲಿ ತಿಳಿಸಿದ್ದಾರೆ.
ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಭೇಟಿ : ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಮೊರಾರ್ಜಿ ಶಾಲೆಯಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಖಾಯಂ ನೌಕರರಿಲ್ಲದೆ ಹೊರಗುತ್ತಿಗೆ ಆಧಾರಿತವಾಗಿ ನೇಮಕಗೊಂಡ ಸಿಬ್ಬಂದಿಗಳು ಹಾಗೂ ಪ್ರಾಂಶುಪಾಲರು ಇಲ್ಲಿ ಸೇವೆ ಸಲ್ಲಿಸುತ್ತಿದ್ದು.ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಿಗಾವಹಿಸುವುದಾಗಿ ಮೈನಾರಿಟಿ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ್ ಕುಮಾರ್ ತಿಳಿಸಿದರು. ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಎಸ್ . ಸಿದ್ದಪ್ಪ ಹಾಗೂ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರುಗಳು ಇದ್ದರು.