ಹರಪನಹಳ್ಳಿ, ಡಿ.16- ಮತಾಂತರ ನಿಷೇಧ ಕಾಯ್ದೆ ಜಾರಿಯಾಗದಿದ್ದಲ್ಲಿ ಜನಾಂಗೀಯ ಸಂಘರ್ಷಕ್ಕೆ ದಾರಿಯಾ ಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಪಟ್ಟಣದ ಶ್ರೀ ತೆಗ್ಗಿನಮಠ ಸಂಸ್ಥಾನದ ಆವರಣದಲ್ಲಿ ಲಿಂ.ಚಂದ್ರಮೌಳೀಶ್ವರ ಶ್ರೀಗಳವರ 7ನೇ ವರ್ಷದ ಪುಣ್ಯ ಸ್ಮರಣೋತ್ಸವ, ವರಸದ್ಯೋಜಾತ ಶ್ರೀಗಳವರ ಪಟ್ಟಾಧಿಕಾರದ 6ನೇ ವಾರ್ಷಿಕೋತ್ಸವ. ವೀರ ಮಹೇಶ್ವರರಿಗೆ ಶಿವದೀಕ್ಷೆ, ತೆಗ್ಗಿನಮಠದ ಬಂಧನ ವೆಬ್ ಸೈಟ್ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತುಳಿದು ಬದುಕುವುದಕ್ಕಿಂತ, ತಿಳಿದು ಬದುಕುವುದು ಶ್ರೇಷ್ಠ. ಸಂಸ್ಕಾರವಂತರಾಗಿ ಬದುಕಿ, ಬಾಳಲು ಗುರು ಮಾರ್ಗದರ್ಶನ ಅವಶ್ಯ ಎಂದರು.
ವೀರಶೈವ ಧರ್ಮದಲ್ಲಿ ಅಷ್ಟೇ ಅಲ್ಲ, ಎಲ್ಲ ಧರ್ಮಗಳಲ್ಲೂ ಸಹ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಲಿಂ.ಚಂದ್ರಮೌಳೀಶ್ವರ ಶ್ರೀಗಳು ಧರ್ಮ ಮುಖಿ ಮತ್ತು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದನ್ನು ಮರೆಯಲಾ ಗದು ಎಂದರು.
ಶೈಕ್ಷಣಿಕ ರಂಗದಲ್ಲಿ ಅದ್ಭುತ ಸತ್ಕ್ರಾಂತಿಗೈದ ಶಿವಾಚಾರ್ಯ ರತ್ನ ಅವರಾಗಿದ್ದರು. ಅವರ ಪುಣ್ಯ ಸ್ಮರಣೆ ಬದುಕಿ ಬಾಳುವ ಜನ ಸಮುದಾಯಕ್ಕೆ ದಾರಿದೀಪವಾಗಲಿ. ಇಂದಿನ ವರಸದ್ಯೋ ಜಾತ ಶ್ರೀಗಳವರು ಲಿಂ.ಶ್ರೀಗಳವರ ಆದರ್ಶದ ದಾರಿಯಲ್ಲಿ ಮುನ್ನಡೆದು ಮಠದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶ್ರೀಗಳವರು ಆರು ವರುಷಗಳ ಅವಧಿ ಯಲ್ಲಿ ಮಾನವೀಯ ಮೌಲ್ಯ, ಧರ್ಮ ಪ್ರಸಾರ ಹೆಚ್ಚಿಸುತ್ತಾ ಐ.ಎ.ಎಎಸ್., ಕೆಎಎಸ್ನಂತಹ ಉನ್ನತ ಹುದ್ದೆಗಳಿಗೆ ತರಬೇತಿ ಕೇಂದ್ರವನ್ನು ತೆರೆಯಲು ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಿ ಎಂದರು
ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಕೀರ್ತಿ ಲಿಂ.ಚಂದ್ರಮೌಳೇಶ್ವರ ಶ್ರೀಗಳಿಗೆ ಸಲ್ಲುತ್ತದೆ. ತ್ಯಾಗಮಯ ಜೀವನಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದವರು, ಕಾಯಕದ ಜತೆಗೆ ಶಿಕ್ಷಣ, ಧರ್ಮ ಪ್ರಸಾರದೊಂದಿಗೆ ಸಾಮಾಜಿಕ ಕಳಕಳಿಯಿಂದ ಶ್ರೀಮಠ ಎತ್ತರಕ್ಕೆ ಬೆಳೆಯಲು ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಹರಪನಹಳ್ಳಿ ಒಳಗೊಂಡು 65 ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಪ್ರಸಿದ್ದಿಯಾಗಿದ್ದಾರೆ. ವೀರಶೈವ ಧರ್ಮ ಸಂಸ್ಕೃತಿ ಬೆಳೆಸುವ, ಭಕ್ತರಿಗೆ ಸಂಸ್ಕಾರ ಕೊಡುವ, ಸಾಮಾಜಿಕ ಕಾರ್ಯಗಳನ್ನು ಮಾಡುವುದೇ ನಮ್ಮ ಗುರಿಯಾಗಿದೆ ಎಂದರು.
ಜೆ.ಡಿ.ಎಸ್.ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ ಸಮಾರಂಭ ಉದ್ಘಾಟಿಸಿದರು. ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು.
ಮಠದ ಆಡಳಿತಾಧಿಕಾರಿ ಟಿ.ಎಂ.ಚಂದ್ರಶೇಖರಯ್ಯ, ಮಾನಿಹಳ್ಳಿ ಮಳೆಯೋಗೀಶ್ವರ ಶ್ರೀಗಳು, ನೆಗಳೂರು ಗುರುಶಾಂತೇಶ್ವರ ಶ್ರೀಗಳು, ಕೂಡ್ಲಿಗಿ ಪ್ರಶಾಂತ ಶ್ರೀಗಳು, ಕುವೆಂಪು ವಿವಿ ಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ ಮಾತನಾಡಿದರು.
ಬಿ.ಇಡಿ. ಕಾಲೇಜು ಪ್ರಾಚಾರ್ಯ ಟಿ.ಎಂ.ರಾಜಶೇಖರ್ ಸೇರಿದಂತೆ, ಅರುಣಕುಮಾರ, ನಾಗೇಂದ್ರರಾವ್, ಶಾಂತಾ ಆನಂದ, ಎಂ.ಪಿ.ಎಂ.ಶಾಂತವೀರಯ್ಯ, ವೀರನಗೌಡ, ಸಿ.ಎಂ.ಕೊಟ್ರಯ್ಯ, ನಾಗನಗೌಡ್ರು, ಮಲ್ಲಿಕಾರ್ಜುನ ಕಲ್ಮಠ ಮತ್ತಿತರರು ಭಾಗವಹಿಸಿದ್ದರು.
ಪ್ರಶಸ್ತಿ ಪ್ರದಾನ : ಮರಿಯಮ್ಮನಹಳ್ಳಿ ಬಿ.ಮಂಜಮ್ಮ ಜೋಗತಿ ಅವರಿಗೆ ಜಾನಪದ ಕಲಾಸಿರಿ, ಹೊಸಪೇಟೆಯ ಹೆಚ್.ವಿ.ಶರಣಸ್ವಾಮಿ ಅವರಿಗೆ ವೀರಶೈವ ಸೇವಾ ಸಿರಿ, ಬೆಂಗಳೂರಿನ ಡಬ್ಲ್ಯು.ಎಂ. ಶಿವಕುಮಾರ್ ಅವರಿಗೆ ಶಕ್ತಿ ಸೇವಾ ಸಿರಿ, ತಿರುಪತಿ ಡಾ. ಟಿ.ಎಂ.ನಾಗೇಶ್ ಅವರಿಗೆ ಉದಯೋನ್ಮುಖ ವೈದ್ಯ ಸಿರಿ, ಸಿಂಗಟಾಲೂರಿನ ಕೆ.ವಿ.ಹಂಚಿನಾಳ ಅವರಿಗೆ ಸಮಾಜ ಸೇವಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ನಿವೃತ್ತ ನೌಕರರು ಹಾಗು ವಿವಿಧ ಗಣ್ಯರನ್ನು ಕೂಡ ಸನ್ಮಾನಿಸಲಾಯಿತು.