ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು 10 ದಿನಗಳೊಳಗಾಗಿ ಪಾವತಿ ಮಾಡಿ, ಸರ್ಕಾರದ ಖಾತೆಗೆ ಜಮಾ ಮಾಡಬೇಕು.
– ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ
ದಾವಣಗೆರೆ, ಡಿ. 16- ಕೋವಿಡ್ -19 ಸೋಂಕು ತಪಾಸಣೆ ಕುರಿತಂತೆ ಎಕ್ಸ್ರೇ, ಸಿಟಿ ಸ್ಕ್ಯಾನ್ ಎಂಆರ್ಐ ಸ್ಕ್ಯಾನ್ ಮುಂತಾದ ಆರೋಗ್ಯ ಸೇವೆಗಳನ್ನು ನೀಡಲು ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಹೆಚ್ಚಿನ ದರವನ್ನು ಸಾರ್ವಜನಿಕರಿಂದ ವಸೂಲಿ ಮಾಡಿದ ದಾವಣಗೆರೆಯ ವಿವಿಧ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ತಲಾ 10 ರಿಂದ 50 ಸಾವಿರ ರೂ. ವರೆಗೆ ದಂಡ ವಿಧಿಸಿ, ದಂಡದ ಮೊತ್ತವನ್ನು 10 ದಿನಗಳೊಳಗಾಗಿ ಸಂಗ್ರಹಿಸಿ ಸರ್ಕಾರಕ್ಕೆ ಜಮಾ ಮಾಡುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ (ಕೆಪಿಎಂಇ) ಕಾಯ್ದೆ ಅನುಷ್ಠಾನ ಕುರಿತಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆರ್ಥಿಕವಾಗಿ ಹೊರೆಯಾಗಬಾರದು ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳು ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು, ಸಾರ್ವಜನಿಕರಿಂದ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡಬಾರದೆಂಬ ಉದ್ದೇಶದಿಂದ ಎಕ್ಸ್ರೇ, ಸಿಟಿ ಸ್ಕ್ಯಾನ್ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳಿಗೆ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಸರ್ಕಾರದ ಆದೇಶ ಉಲ್ಲಂಘಿಸಿ ವಿವಿಧ ಖಾಸಗಿ ಆರೋಗ್ಯ ಸಂಸ್ಥೆಗಳು ಹೆಚ್ಚಿನ ದರ ವಿಧಿಸುತ್ತಿರುವುದು ಕಂಡುಬಂದಿದ್ದು, ಸಾರ್ವಜನಿಕರಿಂದ ನಿಯಮ ಬಾಹಿರವಾಗಿ ಹಣ ಲೂಟಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾನೂನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದ ಜಿಲ್ಲಾಧಿಕಾರಿಗಳು ದಂಡ ಪಾವತಿಯಾಗುವವರೆಗೂ ಕೆಪಿಎಂಇ ಅಥವಾ ಪಿಸಿ ಅಂಡ್ ಪಿಎನ್ಡಿಟಿ ಅಡಿ ಸಲ್ಲಿಸಿರುವ ಯಾವುದೇ ಮನವಿಯನ್ನು ತಿರಸ್ಕರಿಸಬಾರದು ಎಂದು ಸೂಚನೆ ನೀಡಿದರು.
ಖಾಸಗಿ ಆಸ್ಪತ್ರೆಗಳು ನಿಗದಿತ ಮಾರ್ಗ ಸೂಚಿಯಂತೆ ವೈದ್ಯಕೀಯ ತ್ಯಾಜ್ಯದ ವಿಲೇವಾರಿಗಾಗಿ ಸರ್ಕಾರ ನಿಗದಿಪಡಿಸಿರುವ ದರದಂತೆ ಮೊತ್ತವನ್ನು ಸಂಬಂಧಪಟ್ಟವರಿಗೆ ಪಾವತಿಸಬೇಕೆಂದು ತಿಳಿಸಿದರು.
ನೋಡಲ್ ಅಧಿಕಾರಿ ಡಾ. ರೇಣುಕಾರಾಧ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಮಾತನಾಡಿದರು.
ಸಭೆಯಲ್ಲಿ ಜಿ.ಪಂ. ಸಿಇಓ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಡಿಹೆಚ್ಓ ಡಾ. ನಾಗರಾಜ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ಐಎಂಎ ಅಧ್ಯಕ್ಷ ಡಾ. ಸೋಮಶೇಖರ್ ಸೇರಿದಂತೆ ಮತ್ತಿತರರಿದ್ದರು.