ದಾವಣಗೆರೆ, ಡಿ.15- ದೇಶದ ಪ್ರಗತಿ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿ ಸುವ ಉದ್ದೇಶದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾ ಗಿದೆ ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಹೇಳಿದರು.
ನಗರದ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇಂದು ಏರ್ಪಾಡಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಆಧಾರಿತ ಇತಿಹಾಸ ಪದವಿ ಪಠ್ಯಕ್ರಮ ಕಾರ್ಯಾಗಾರ, ಇತಿಹಾಸ ಪಠ್ಯಪುಸ್ತಕ ಬಿಡುಗಡೆ, ಕ್ರೀಡಾ, ಸಾಂಸ್ಕೃತಿಕ, ಯುವರೆಡ್ ಕ್ರಾಸ್, ಎನ್.ಎಸ್.ಎಸ್., ಎನ್.ಸಿ.ಸಿ. ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸ ತಿಳಿದಿರಬೇಕು. ಸ್ಥಳೀಯ ಯಶಸ್ವೀ ವ್ಯಕ್ತಿಗಳ ಇತಿಹಾಸ ಮಕ್ಕಳಿಗೆ ಪ್ರೇರಣೆ ನೀಡುತ್ತದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ನನ್ನ ಆದರ್ಶ ವ್ಯಕ್ತಿಯಾಗಿದ್ದರು. ಅಂತವರ ಛಲ ವಿದ್ಯಾರ್ಥಿಗಳಲ್ಲೂ ಬರಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿ, ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆ ಈ ಮೂರರಲ್ಲೂ ತೊಡಗಿಸಿಕೊಂಡವನು ಮಾತ್ರ ಅತ್ಯುತ್ತಮ ಶಿಕ್ಷಕನಾಗಲು ಸಾಧ್ಯ ಎಂದು ಹೇಳಿದರು.
ಶಿಕ್ಷಕ ತನ್ನ ವೃತ್ತಿಯಲ್ಲಿ ಏನು ಕೆಲಸ ಮಾಡಿ ದ್ದಾನೆ ಎಂಬುದನ್ನು ತಿಳಿಸುವುದು ತಾನು ಬರೆದ ಪುಸ್ತಕಗಳಿರುವ ಗ್ರಂಥಾಲಯ ಹಾಗೂ ತನ್ನ ವಿದ್ಯಾರ್ಥಿಗಳು ಮಾತ್ರ ಎಂದರು.
ಅರ್ಧ ಇಡ್ಲಿ ತಿಂದು ಉಪ್ಪಿಟ್ಟು ಬೇಕೆನ್ನುವುದು ಸರಿಯೇ ?
`ಒಂದು ಹೋಟೆಲ್ಗೆ ಹೋಗಿ ಇಡ್ಲಿ ಆರ್ಡರ್ ಮಾಡಿ ಅರ್ಧ ತಿಂದಾದ ನಂತರ ನನಗೆ ಇದು ಬೇಡ ಉಪ್ಪಿಟ್ಟು ಬೇಕು’ ಎಂಬುದು ಸರಿಯಲ್ಲ. ಹಾಗೆಯೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ `ಮಲ್ಟಿಪಲ್ ಎಂಟ್ರಿ ಹಾಗೂ ಎಕ್ಸಿಟ್ ಸಿಟ್ಟಿಮ್’ನಡಿ ಒಂದು ವರ್ಷ ಒಂದು ವಿಷಯ ಕಲಿತು ಮತ್ತೆ ಬೇರೆ ವಿಷಯ ಆಯ್ಕೆ ಮಾಡಿಕೊಳ್ಳುವುದರಿಂದ ಸಮಯ ವ್ಯರ್ಥ ಎಂದು ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣ ಕಲಿಯಲು ಬರಬೇಕು. ಕೊಠಡಿಯಲ್ಲಿರಬೇಕು. ಕಲಿಯಬೇಕು. ಶಿಕ್ಷಣ ಮುಗಿಸಿ ಹೊರ ಹೋಗಬೇಕು ಎಂಬುದು ಗುರುಕುಲ ಶಿಕ್ಷಣ ಪದ್ಧತಿ ಎಂದರು.
ಎಸ್ಸೆಸ್ಸೆಲ್ಸಿ ಅವಧಿಯಲ್ಲಿಯೇ ವಿದ್ಯಾರ್ಥಿಗೆ ತನ್ನ ಅಭಿರುಚಿಗೆ ತಕ್ಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಬದಲಾವಣೆ ಮಾಡಿಕೊಳ್ಳ ಬೇಕಾದರೆ ತಕ್ಷಣ ಮಾಡಿಕೊಳ್ಳಬೇಕು. ಒಂದು ವರ್ಷ ವ್ಯರ್ಥ ಮಾಡಿ ಬದಲಾಗು ವುದಲ್ಲ. ಸಮಯ ಅಮೂಲ್ಯವಾದದ್ದು ಎಂದು ಈಶ್ವರಪ್ಪ ಹೇಳಿದರು.
ನೂತನ ಶಿಕ್ಷಣ ನೀತಿ ಕುರಿತು ಮಾತನಾ ಡಿದ ಅವರು, ಹೊಸದು ಬರುತ್ತಿರಬೇಕು. ಅದನ್ನು ನಾವು ಸ್ವಾಗತಿಸಬೇಕು. ಹೊಸದಲ್ಲಿ ರುವ ಶ್ರೇಷ್ಠತೆ ಹಾಗೂ ಕನಿಷ್ಟತೆಗಳನ್ನು ಗುರುತಿಸಬೇಕು. ಹೊಸದು ಎಂದಾಕ್ಷಣ ಎಲ್ಲವೂ ಶ್ರೇಷ್ಠವಲ್ಲ ಎಂದು ಹೇಳಿದರು.
ಇತಿಹಾಸ ಎನ್ನುವುದು ನಮಗೆ ಪಾಠವಾಗಬೇಕು. ಎಲ್ಲಾ ಜನರ ಜೀವನ ಚರಿತ್ರೆ ಬರೆಯುವುದೇ ಇತಿಹಾಸ. ಇತಿಹಾಸವನ್ನು ಯಾರಾದರೂ ರಚಿಸಬಹುದು. ಆದರೆ ಬರೆಯುವುದು ಸುಲಭದ ಕೆಲಸವಲ್ಲ ಎಂದ ಈಶ್ವರಪ್ಪ, ಪರೀಕ್ಷೆಗೆ ಸನ್ನದ್ಧರಾಗಿ ಬಂದರೆ ಮಾತ್ರ ಮೂರು ತಾಸು ಪರೀಕ್ಷೆ ಸುಲಲಿತವಾಗಿ ಬರೆಯಲು ಸಾಧ್ಯ. ಅಂತಹ ಕ್ರಿಯಾತ್ಮಕ ಶಕ್ತಿಯನ್ನು ಪಡೆಯಲೆಂದೇ ಹೊಸ ಶಿಕ್ಷಣ ನೀತಿ ತರಲಾಗುತ್ತಿದೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ.ಕೆ.ಎಸ್. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕ ಪ್ರೊ.ಮಲ್ಲಿಕಾರ್ಜುನ ಆರ್.ಹಲಸಂಗಿ ಸ್ವಾಗತಿಸಿದರು.
ಹಿರಿಯ ಪತ್ರಕರ್ತ ಎನ್. ವಿಶಾಖ್, ಪ್ರೊ.ಜೆ. ಅನಿತಾಕುಮಾರಿ, ದಾವಿವಿ ಇತಿಹಾಸ ಅಧ್ಯಯನ ಮಂಡಳಿ ಅಧ್ಯಕ್ಷ ಡಾ.ವೆಂಕಟರಾವ್ ಎಂ.ಪಾಲಟೆ, ದಾವಿವಿ ಇತಿಹಾಸ ಅಧ್ಯಾಪಕರ ವೇದಿಕೆ ಅಧ್ಯಕ್ಷ ಡಾ.ಬಿ.ಪಿ. ಕುಮಾರ್, ಸಹ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಜವಳಿ ಉಪಸ್ಥಿತರಿದ್ದರು.