ದಾವಣಗೆರೆ ಜಿಲ್ಲೆ ಭಾಗವಾಗಿದ್ದ ಎರಡು ಕಡೆಯೂ ಬಿಜೆಪಿಗೆ ಜಯ
ದಾವಣಗೆರೆ, ಡಿ. 14 – ಚಿತ್ರದುರ್ಗ – ದಾವಣಗೆರೆ ಹಾಗೂ ಶಿವಮೊಗ್ಗ – ದಾವಣಗೆರೆ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆ ಕ್ಷೇತ್ರಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿಯ ಕೆ.ಎಸ್. ನವೀನ್ ಹಾಗೂ ಡಿ.ಎಸ್. ಅರುಣ್ ಜಯ ಗಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯು ಚಿತ್ರದುರ್ಗ ಹಾಗೂ ಶಿವಮೊಗ್ಗ ಕ್ಷೇತ್ರಗಳ ನಡುವೆ ಹಂಚಿಕೆಯಾಗಿದೆ. ಕಳೆದ ಡಿ. 10ರಂದು ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ.
ಕೆ.ಎಸ್. ನವೀನ್ ಅವರು ಕಾಂಗ್ರೆಸ್‌ನ ಬಿ. ಸೋಮಶೇಖರ್ ವಿರುದ್ಧ 358 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ನವೀನ್ ಅವರು 2,629 ಮತ ಪಡೆದಿದ್ದರೆ, ಬಿ. ಸೋಮಶೇಖರ್ 2,271 ಮತಗಳನ್ನು ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಅವರು ಕೇವಲ 16 ಮತ ಪಡೆದಿದ್ದಾರೆ. 144 ಮತಗಳು ತಿರಸ್ಕೃತಗೊಂಡಿವೆ. ಚಿತ್ರದುರ್ಗ – ದಾವಣಗೆರೆಯ ಈ ಕ್ಷೇತ್ರದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ ಹಾಗೂ ಜಗಳೂರು ತಾಲ್ಲೂಕು ಸೇರಿವೆ.
ನವೀನ್ ಅವರು ಕಳೆದ ಎರಡು ಚುನಾವಣೆಗಳಲ್ಲಿ ಸೋಲುಂಡಿದ್ದರು. ಮೂರನೇ ಬಾರಿಗೆ ಅವರಿಗೆ ಜಯ ಸಾಧ್ಯವಾಗಿದೆ.
ಗೆಲುವಿನ ನಂತರ ಮಾತನಾಡಿರುವ ಕೆ.ಎಸ್. ನವೀನ್, ಇದು ಹಣ ಬಲ ಮತ್ತು ಜನ ಬಲದ ನಡುವೆ ನಡೆದ ಚುನಾವಣೆ. ಕ್ಷೇತ್ರದ ಹೊರಗಿನ ಅಭ್ಯರ್ಥಿ ಬದಲು ಮನೆ ಮಗನಿಗೆ ಮತದಾರರು ಮಣೆ ಹಾಕಿದ್ದಾರೆ. ಇದೊಂದು ಹೋರಾಟದ ಚುನಾವಣೆ ಆಗಿತ್ತು. ಎರಡೂ ಜಿಲ್ಲೆಗಳ ಶಾಸಕರು ಮತ್ತು ಸಂಸದರು ಸಹಕಾರ ನೀಡಿದರು. ಹೀಗಾಗಿ, ಗೆಲುವು ಸುಲಭವಾಯಿತು ಎಂದು ಹೇಳಿದ್ದಾರೆ.
ಶಿವಮೊಗ್ಗ ಕ್ಷೇತ್ರದಲ್ಲಿ 2,192 ಮತಗಳನ್ನು ಪಡೆದ ಬಿಜೆಪಿಯ ಡಿ.ಎಸ್. ಅರುಣ್ ಜಯ ಗಳಿಸಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಆರ್. ಪ್ರಸನ್ನ ಕುಮಾರು 1,848 ಮತಗಳನ್ನು ಪಡೆದಿದ್ದಾರೆ. 344 ಮತಗಳ ಅಂತರದಲ್ಲಿ ಅವರು ಜಯ ದಾಖಲಿಸಿದ್ದಾರೆ. ಇದು ಅರುಣ್ ಅವರ ಮೊದಲ ಗೆಲುವಾಗಿದೆ.
ಜೆ.ಡಿ.ಯು.ನ ಶಶಿಕುಮಾರ್ ಗೌಡ ಕೇವಲ ಮೂರು ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಪಿ.ವೈ. ರವಿ ಅವರು 4 ಮತ ಪಡೆಯಲು ಮಾತ್ರ ಸಾಧ್ಯವಾಗಿದೆ. 109 ಮತಗಳು ತಿರಸ್ಕೃತಗೊಂಡಿವೆ.
ಗೆಲುವಿನ ನಂತರ ಡಿ.ಎಸ್. ಅರುಣ್ ಮಾತನಾಡಿದ್ದು, ನಾಮಪತ್ರ ಸಲ್ಲಿಕೆಯ ನಂತರ ಚುನಾವಣಾ ಪ್ರಚಾರಕ್ಕೆ ಕೆಲವೇ ದಿನಗಳ ಸಮಯವಿತ್ತು. ಇಷ್ಟು ಸಮಯದಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಿಂತ ಕಾರ್ಯಕರ್ತರು ಪ್ರಮುಖವಾಗುತ್ತಾರೆ. ಹೀಗಾಗಿ ಈ ಗೆಲುವು ಕಾರ್ಯಕರ್ತರದ್ದು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪಕ್ಷದ ಸಂಸದರು, ಶಾಸಕರು, ಕಾರ್ಯಕರ್ತರು ತಮ್ಮ ಗೆಲುವಿಗಾಗಿ ಶ್ರಮಿಸಿದ್ದಾರೆ, ಒಳ್ಳೆಯ ಸಾಧನೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ತಮ್ಮ ಗೆಲುವಿಗೆ ನೆರವಾಗಿವೆ ಎಂದು ತಿಳಿಸಿದರು.