ಡಿಎಸ್‌ಎಸ್ ದಿಢೀರ್ ಪ್ರತಿಭಟನಾ ಧರಣಿ
ದಾವಣಗೆರೆ, ಡಿ.13- ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಅಂಬೇಡ್ಕರ್ ಅವರ ಪ್ರತಿಮೆ ಅಂಗಳದಲ್ಲಿ ಯಾವುದೇ ಬ್ಯಾನರ್, ಬಂಟಿಂಗ್ಸ್ ಹಾಕಲು ಅವಕಾಶ ನೀಡದೇ ಕಡಿವಾಣ ಹಾಕುವಂತೆ ಆಗ್ರಹಿಸಿ ನಗರದಲ್ಲಿ ಇಂದು ಸಂಜೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕ ದಿಂದ ದಿಢೀರ್ ಪ್ರತಿಭಟನಾ ಧರಣಿ ನಡೆಸಲಾಯಿತು.
ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಂಘಟನೆ ಜಿಲ್ಲಾಧ್ಯಕ್ಷ ಹೆಚ್.ಸಿ. ಮಲ್ಲಪ್ಪ ನೇತೃತ್ವದಲ್ಲಿ ಧರಣಿ ಕುಳಿತ ಸಂಘಟನೆಯ ಪದಾಧಿಕಾರಿಗಳು, ಅಂಬೇಡ್ಕರ್ ಪ್ರತಿಮೆಗಾಗಲೀ, ಬಳಿಯಾಗಲೀ ಒಬ್ಬರಿಗೆ ಬ್ಯಾನರ್, ಬಂಟಿಂಗ್ಸ್ ಗೆ ಅವಕಾಶ ನೀಡಿದರೆ ರಾಜಕೀಯ ಪಕ್ಷಗಳು, ಇತರೆಯವರು ನಾನಾ ಕಾರ್ಯಕ್ರಮಗಳ ಪ್ರಚಾರಕ್ಕೆ ಬ್ಯಾನರ್, ಬಂಟಿಂಗ್ಸ್ ಹಾಕಿ ಅಂಬೇಡ್ಕರ್ ಅವರ ಪ್ರತಿಮೆ ಅವುಗಳಲ್ಲೇ ಮುಚ್ಚಿ ಹೋಗುವಂತಾಗಲಿದೆ. ಇದು ಅಂಬೇಡ್ಕರ್ ಅವರಿಗೆ ಅಗೌರವ ಸೂಚಿಸಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ವೃತ್ತವನ್ನೇ ಕೆಇಬಿ ವೃತ್ತವೆನ್ನಲಾ ಗುತ್ತಿದ್ದು, ಈ ವೃತ್ತ ಅಂಬೇಡ್ಕರ್ ವೃತ್ತವೆಂದೆನಿಸಿಕೊಳ್ಳಲು ವೃತ್ತದ ನಾಲ್ಕು ಕಡೆಗಳಲ್ಲೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತವೆಂಬ ಹೆಸರಿನ ನಾಮಫಲಕ ಅಳವಡಿಸಬೇಕು. ಅಂಬೇಡ್ಕರ್ ಪ್ರತಿಮೆಯ ಸ್ವಚ್ಚತೆ, ಅಲಂಕಾರ ಕೇವಲ ಸಂಘಟನೆಗಳಿಂದ ಮಾಡಲಾಗುತ್ತಿದೆ. ಆದರೆ ನಗರ ಪಾಲಿಕೆ ಯಾವುದೇ ಜವಾಬ್ದಾರಿ ತೋರುತ್ತಿಲ್ಲ. ಈ ಪ್ರತಿಮೆಯ ಅಭಿವೃದ್ಧಿ, ಸ್ವಚ್ಚತೆ, ಬಣ್ಣದಿಂದ ಕಂಗೊಳಿಸುವಂತೆ ಮಾಡಲು ನಗರ ಪಾಲಿಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ನಗರ ಪಾಲಿಕೆ ಆಯುಕ್ತರು ಸ್ಥಳಕ್ಕಾಗಮಿಸಬೇಕೆಂದು ಪಟ್ಟು ಹಿಡಿದ ವೇಳೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸಿಪಿಐ ಗುರುಬಸವರಾಜ್ ಮತ್ತು ಕೆಟಿಜೆ ನಗರ ಪಿಎಸ್‍ಐ ಡಿ. ಪ್ರಭು ಪ್ರತಿಭಟನಾ ನಿರತರ ಮನವೊಲಿಸಿ ಪ್ರತಿಭಟನೆಯಿಂದ ದೂರ ಸರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಶಾಮನೂರು ಸಮಾದೆಪ್ಪ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಕಬ್ಬೂರು ಮಂಜುನಾಥ, ನಗರಾಧ್ಯಕ್ಷ ಹೆಚ್.ಎಸ್. ಚೆನ್ನಬಸಪ್ಪ, ಮಂಜುನಾಥ ಲೋಕಿಕೆರೆ, ಆನಗೋಡು ಪ್ರಶಾಂತ್, ಪೈಲ್ವಾನ್ ಕರಿಬಸಪ್ಪ ಸೇರಿದಂತೆ ಇತರರು ಇದ್ದರು.