ದಾವಣಗೆರೆ, ಡಿ.13- ದಾವಣಗೆರೆ ವಿಶ್ವವಿದ್ಯಾನಿಲಯ ದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ಸವಲತ್ತುಗಳನ್ನು ಪ್ರವರ್ಗ-1ರ ವಿದ್ಯಾರ್ಥಿಗಳಿಗೂ ನೀಡಬೇಕು ಎಂದು ಜಿಲ್ಲಾ ಪ್ರವರ್ಗ-1ರ ಜಾತಿ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ತುರ್ಚಘಟ್ಟ ಒತ್ತಾಯಿಸಿದರು.
ಮೊದಲು ಪ್ರವರ್ಗ-1 ರ ವಿದ್ಯಾರ್ಥಿಗಳಿಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಿಗುವ ಸೌಲಭ್ಯದಂತೆ ಶುಲ್ಕ ರಹಿತವಾಗಿ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಈ ಸಾಲಿನಲ್ಲಿ ಅದನ್ನು ಬದಲಾಯಿಸಿ, ಓಬಿಸಿಗೆ ಸೇರಿಸಿ ದಾಖಲಿಸಿಕೊಳ್ಳಲು ಶುಲ್ಕ ಪಾವತಿ ಮಾಡುವುದು ಕಡ್ಡಾಯ ವೆಂದು ದಾವಿವಿ ಹೇಳುತ್ತಿದೆ ಎಂದು ಇಂದಿಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮತ್ತು ಹಿಂದುಳಿದ ವರ್ಗದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಅವರು ಸರ್ಕಾರದ ಆದೇಶದಂತೆ ಶುಲ್ಕ ಕಟ್ಟಲೇಬೇಕಿದ್ದು, ನಂತರ ಸರ್ಕಾರ ಖಾತೆಗೆ ಹಣ ವಾಪಸ್ ಮಾಡುವುದಾಗಿ ಹೇಳುತ್ತಾರೆ. ಪ್ರವರ್ಗ-1 ಕ್ಕೆ ಸೇರುವ 95 ಜಾತಿಗಳು ಆರ್ಥಿಕ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು, ಸರ್ಕಾರದ ಈ ಆದೇಶದಿಂದ ಶುಲ್ಕ ಪಾವತಿಸಲಾಗದೆ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದಿಂದ ಹಿಂದುಳಿಯಬೇಕಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷರಾದ ಮಂಜಮ್ಮ, ಗೊಲ್ಲರ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಭೋಜರಾಜಪ್ಪ, ಹನುಮಂತರಾಜು, ದೇವೇಂದ್ರಪ್ಪ, ಬಿ. ಪ್ರಭು, ಭರತ್ ಮೈಲಾರ್, ವಿಜಯ್ ಕುಮಾರ್ ಸೇರಿದಂತೆ ಇತರರು ಇದ್ದರು.