ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು

ದಾವಣಗೆರೆ, ಡಿ.12- ಎಸ್.ಎಸ್.ಕೇರ್ ಟ್ರಸ್ಟ್, ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಕಾಲೇಜು ಆಫ್ ಡೆಂಟಲ್ ಸೈನ್ಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗಾಗಿ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರವನ್ನು ನಗರಪಾಲಿಕೆಯ 37ನೇ ವಾರ್ಡ್‍ನ ಕೆ.ಟಿ.ಜೆ.ನಗರ, ಕೆ.ಇ.ಬಿ.ಕಾಲೋನಿ, ಸಿದ್ದರಾಮೇಶ್ವರ ಬಡಾವಣೆ, ಸಿದ್ಧಗಂಗಾ ಬಡಾವಣೆ, ಲೆನಿನ್‌ ನಗರದಲ್ಲಿ ಇಂದು ನಡೆಸಲಾಯಿತು.

ಸಿದ್ಧಗಂಗಾ ಶಾಲಾವರಣದಲ್ಲಿ ಏರ್ಪಾಡಾಗಿದ್ದ ಈ ಶಿಬಿರವನ್ನು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ಉದ್ಘಾಟಿಸಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೆಲಸದ ಒತ್ತಡಕ್ಕೊಳಗಾಗಿ ತಮ್ಮ ಆರೋಗ್ಯದ ಕಡೆ ಗಮನ ಹರಿಸದ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವಿಷಾದಿಸಿದರು.

ಮಹಿಳೆಯರ ಒತ್ತಡ ಜೀವನದಲ್ಲಿ ಆರೋಗ್ಯದ ಕಡೆ ಗಮನ ಹರಿಸದಿರುವುದನ್ನು ತಿಳಿದು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್.ಎಸ್. ಕೇರ್ ಟ್ರಸ್ಟ್‍ನಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲುದ್ದೇಶಿಸಿ ಪ್ರತಿ ವಾರ್ಡ್ ಮಟ್ಟದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ  ಎಂದು ಅವರು ತಿಳಿಸಿದರು.

ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶ್ವೇತಾ ಶ್ರೀನಿವಾಸ್ ಮಾತನಾಡಿ, ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿರುವ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರ ಸಾಮಾಜಿಕ ಸೇವೆಯನ್ನು ಪ್ರಶಂಸಿಸಿದರು.

ಶಿಬಿರದಲ್ಲಿ 37ನೇ ವಾರ್ಡ್‍ನ ಸುಮಾರು 200 ಮಹಿಳೆಯರು ವಿವಿಧ ತಪಾಸಣೆಗೆ ಒಳಗಾದರು. ಅದರಲ್ಲಿ 60 ಮಹಿಳೆಯರಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.

ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ಬಿ.ಎಸ್.ಪ್ರಸಾದ್, ಉಪ ಪ್ರಾಂಶುಪಾಲರಾದ ಡಾ|| ಎ.ಅರುಣಕುಮಾರ್, ಡಾ|| ಶಾಂತಲಾ, ಡಾ|| ಅಶ್ವಿನ್, ಡಾ|| ಕಮಲೇಶ್, ಡಾ|| ಜಮೀನುಲ್ಲಾ, ಡಾ|| ಪ್ರಿಯಾಂಕ, ಡಾ|| ಶಿಲ್ಪ, ಡಾ|| ಶಿವಕುಮಾರ್, ಡಾ|| ಪ್ರಶಾಂತ್, ಸಂತೋಷ್, ಸೇವಾದಳದ ಮಣಿಕಂಠ, ಗಜೇಂದ್ರ, ಎಸ್. ಭಾಸ್ಕರ್ ಮತ್ತು ಇತರರು ಶಿಬಿರದಲ್ಲಿ ಭಾಗವಹಿಸಿದ್ದರು.

error: Content is protected !!