ಹರಿಹರ, ಡಿ.12- ಹರಮಾಲೆ ಕಾರ್ಯ ಕ್ರಮದ ಲೋಗೋ ಹಾಗೂ ಬ್ಯಾನರ್‌ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿಡುಗಡೆಗೊಳಿಸಿದರು.
ಶ್ರೀ ವಚನಾನಂದ ಮಹಾಸ್ವಾಮಿಗಳು, ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಒಗ್ಗೂಡಿಸಿ, ಹಲವಾರು ಅತ್ಯವಶ್ಯಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಸಮುದಾಯದ ಉತ್ಸಾಹಿ ಯುವಕರಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ, ಒಳ್ಳೆಯ ಅಭ್ಯಾಸಗಳನ್ನು ಅವರ ಜೀವನದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಹರಮಾಲೆ ವೃತ್ತವನ್ನು ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿದ್ದಾರೆ. ಈ ವೃತ್ತದಲ್ಲಿ ನಿಷ್ಠರಾಗಿ ಪಾಲ್ಗೊಳ್ಳುವ ಮೂಲಕ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಯುವಕರಿಗೆ ಸಿಎಂ ಬೊಮ್ಮಾಯಿ ಕರೆ ನೀಡಿದರು.
ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು, ಎಲ್ಲಾ ಸ್ವಾಮೀಜಿಗಳ ಮೂಲ ಕರ್ತವ್ಯ. ಹರಿಹರ ಪಂಚಮಸಾಲಿ ಜಗದ್ಗುರು ಪೀಠ ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟು ಸಾಗುತ್ತಿದೆ. ಜೀವನದ ಹೊಸ್ತಿಲಿನಲ್ಲೇ ದುಶ್ಚಟಗಳಿಗೆ ದಾಸರಾಗಿ, ಗೊಂದಲಕ್ಕೀಡಾಗಿರುವ ಯುವ ಮನಸ್ಸುಗಳನ್ನು ಅಧ್ಯಾತ್ಮದ ತೆಕ್ಕೆಗೆ ತಂದು, ಹರ ಸಂಕಲ್ಪ ಮಾಡಿಸಿ ಜೀವನ ಪಯಣಕ್ಕೆ ಹೊಸ ದಾರಿ ತೋರಿಸಬೇಕು ಎಂಬ ಸದುದ್ಧೇಶದಿಂದ ಹರ ಜಾತ್ರಾ ಮಹೋತ್ಸವದಂದು ಹರಮಾಲೆ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ ಎಂದು ಜಗದ್ಗುರುಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಡಾ|| ಸುಧಾಕರ್ ಮತ್ತು ಮುರುಗೇಶ್ ನಿರಾಣಿ, ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಬಿ.ನಾಗನಗೌಡರು, ನಿಕಟಪೂರ್ವ ರಾಜ್ಯಾಧ್ಯಕ್ಷ ಬಸವರಾಜ್ ದಿಂಡೂರು, ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಹನಶಿ, ಚಂದ್ರಶೇಖರ ಪೂಜಾರ್, ಸೋಮನಗೌಡ ಪಾಟೀಲ, ಶ್ರೀಮತಿ ವಸಂತ ಹುಲ್ಲತ್ತಿ, ವಕೀಲ ಬಿ.ಎಸ್. ಪಾಟೀಲರು ಹಾಗೂ ಮತ್ತಿತರರು ಉಪಸ್ಥಿತರಿದ್ದರು