ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್
ಹರಿಹರ, ಡಿ. 12- ಅಯ್ಯಪ್ಪ ದೇವ ಸ್ಥಾನದ ಮುಂಭಾಗದ ದಡ ಕೊಚ್ಚಿ ಕೊಂಡು ಹೋಗದಂತೆ ತಡೆಗೋಡೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ 19 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ರಾಣೆಬೆನ್ನೂರು ಕ್ಷೇತ್ರದ ಶಾಸಕ ಅರುಣ್ ಕುಮಾರ್ ಪೂಜಾರ್ ತಿಳಿಸಿದ್ದಾರೆ.
ನಗರದ ತುಂಗಭದ್ರಾ ನದಿ ದಂಡೆಯ ಮೇಲಿರುವ ಶ್ರೀ ಅಯ್ಯಪ್ಪಸ್ವಾಮಿ ಮಹಾ ದೀಪೋತ್ಸವದ ಮುಕ್ತಾಯದ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸಮಿತಿಯವರು ಹಾಗೂ ಭಕ್ತರ ಉದಾರ ದೇಣಿಗೆಯಿಂದಾಗಿ ಅತ್ಯಂತ ಸುಂದರ ದೇವಸ್ಥಾನ ನಿರ್ಮಾಣವಾಗಿದ್ದು, ಅದು ನಮ್ಮೆಲ್ಲರ ಅಮೂಲ್ಯ ಆಸ್ತಿ ಮತ್ತು ಹೆಮ್ಮೆಯಾಗಿದೆ ಇದರ ಜೊತೆಗೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದ ದಂಡೆ ಕೊಚ್ಚಿಕೊಂಡು ಹೋಗದಂತೆ ತಡೆಯಲು ತಡೆಗೋಡೆ ನಿರ್ಮಾಣ ಮಾಡುವುದರಿಂದ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶವನ್ನು ಹಾಳಾಗದಂತೆ ತಡೆಯಬಹುದು ಎಂದರು.
ಶ್ರೀ ಧರ್ಮಶಾಸ್ತ ಅಯ್ಯಪ್ಪ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿ.ಎಂ. ವಿಜಯಕುಮಾರ್ ಮಾತನಾಡಿ, ಭಕ್ತರ ಉಪಯೋಗಕ್ಕಾಗಿ ದೇವಸ್ಥಾನಕ್ಕೆ ಸಮುದಾಯ ಭವನದ ಅವಶ್ಯಕತೆ ಇದೆ. ಶಾಸಕರು ತಮ್ಮ ಅನುದಾನದಲ್ಲಿ ಸಮುದಾಯ ಭವನವನ್ನು ನಿರ್ಮಿಸಿ ಕೊಡಬೇಕೆಂದು ಒತ್ತಾಯಿಸಿದರು.
ಎರಡು ಕೋಟಿ ಎಪ್ಪತ್ತು ಲಕ್ಷಗಳಷ್ಟು ಹಣ ಖರ್ಚು ಮಾಡಿ ನಿರ್ಮಿಸಲಾದ ದೇವಸ್ಥಾನದ ಶುದ್ಧಿ ಕಾರ್ಯಕ್ಕಾಗಿ ಬೆಂಗಳೂರಿನ ಜಾಲಹಳ್ಳಿಯ ಶ್ರೀ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರಾದ ಬ್ರಹ್ಮಶ್ರೀ ವಿ ಎನ್ ವಾಸುದೇವನ್ ನಂಬೂದ್ರಿ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು .
ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಸಮಿತಿಯ ಪದಾಧಿಕಾರಿಗಳಾದ ಎಸ್.ಎಚ್. ಹೂಗಾರ್, ಪುಟ್ಟಪ್ಪ ಕವಲೆತ್ತು, ಕೋಡಿಯಾಲ ಹೊಸಪೇಟೆ ಗ್ರಾ.ಪಂ. ಅಧ್ಯಕ್ಷ ಚೇತನ್ ಪೂಜಾರ್, ಮಾಜಿ ಅಧ್ಯಕ್ಷ ಪೂಜಾರ್ ಅಣ್ಣಪ್ಪ, ಬಸಣ್ಣ, ಮಂಜುನಾಥ ಚಿಂಚಲಿ, ನಾಗರಾಜ್ ಸ್ವಾಮಿ, , ಚಂದ್ರಕಾಂತ್ ಹೋವಳೆ, ಕುಮಾರ್ ಸ್ವಾಮಿ ಸಾಲಿಮಠ, ಪರಶುರಾಮ ನವುಲೆ, ಹನುಮಂತಸ್ವಾಮಿ, ನಿಂಗಪ್ಪ , ಪ್ರದೀಪ್, ವಿಶ್ವ ಹೂಗಾರ್, ಎಸ್.ರಾಕೇಶ್ , ಅಂಬಾಸ ಮೆಹರ್ವಾಡೆ ಇತರರು ಹಾಜರಿದ್ದರು.