2,780 ಮತದಾರರ ಪೈಕಿ 2,775 ಜನರಿಂದ ಮತದಾನ
ದಾವಣಗೆರೆ ಡಿ.10 – ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಗೆ ದಾವಣಗೆರೆ ಜಿಲ್ಲೆಯಲ್ಲಿ ಶೇ.99.82ರಷ್ಟು ಶಾಂತಿಯುತ ಮತದಾನವಾಗಿದೆ.
ಜಿಲ್ಲೆಯಲ್ಲಿ ಒಟ್ಟು 2780 ಮತದಾರರಿದ್ದಾರೆ. ಅವರಲ್ಲಿ ಐವರು ಮಾತ್ರ ಮತದಾನ ಮಾಡಿಲ್ಲ. 2,775 ಜನರು ಮತದಾನ ಮಾಡಿದ್ದು, ಶೇ.99.82ರಷ್ಟು ಮತದಾನವಾಗಿದೆ. ದಾವಣಗೆರೆಯ ಇಬ್ಬರು, ಜಗಳೂರಿನ ಒಬ್ಬರು, ಚನ್ನಗಿರಿಯ ಒಬ್ಬರು ಹಾಗೂ ಹೊನ್ನಾಳಿಯ ಒಬ್ಬರು ಮತ ಚಲಾಯಿಸಿಲ್ಲ.
ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ನಡುವೆ ದಾವಣಗೆರೆ ತಾಲ್ಲೂಕುಗಳನ್ನು ಹಂಚಲಾಗಿದೆ. ಚಿತ್ರದುರ್ಗ ಕ್ಷೇತ್ರಕ್ಕೆ ಬರುವ ಮೂರು ತಾಲ್ಲೂಕುಗಳಲ್ಲಿ ಶೇ.99.80 ಹಾಗೂ ಶಿವಮೊಗ್ಗ ಕ್ಷೇತ್ರಕ್ಕೆ ನಡೆದ ಚುನಾವಣೆಗೆ ಮೂರು ತಾಲ್ಲೂಕುಗಳಲ್ಲಿ ಶೇ.99.85ರಷ್ಟು ಮತದಾನವಾಗಿದೆ.
ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಗೆ ಬರುವ ದಾವಣಗೆರೆ, ಹರಿಹರ ಹಾಗೂ ಜಗಳೂರು ತಾಲ್ಲೂಕುಗಳಲ್ಲಿನ 1488 ಮತದಾರರ ಪೈಕಿ ಮೂವರು ಮಾತ್ರ ಮತ ಚಲಾಯಿಸಿಲ್ಲ. 1485 ಮತದಾರರು ಮತದಾನ ಮಾಡಿದ್ದು, ಶೇ.99.80ರಷ್ಟು ಮತದಾನವಾಗಿದೆ.
ಶಿವಮೊಗ್ಗ ಕ್ಷೇತ್ರದ ವ್ಯಾಪ್ತಿಗೆ ಬರುವ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳ 1,292 ಮತದಾರರ ಪೈಕಿ ಇಬ್ಬರು ಮಾತ್ರ ಮತ ಚಲಾಯಿಸಿಲ್ಲ. 1290 ಜನರು ಮತ ಚಲಾಯಿಸಿದ್ದು, ಶೇ.99.85ರಷ್ಟು ಮತದಾನವಾಗಿದೆ.
ಕ್ಷೇತ್ರವಾರು ಮತದಾನದ ವಿವರ
ಬೀದರ್ ಶೇ.99.83, ಕಲಬುರಗಿ ಶೇ.99.73, ವಿಜಯಪುರ ಶೇ.99.55, ಬೆಳಗಾವಿ ಶೇ.99.98, ಉತ್ತರ ಕನ್ನಡ ಶೇ.99.76, ಧಾರವಾಡ ಶೇ.99.68, ರಾಯಚೂರು ಶೇ.99.86, ಬಳ್ಳಾರಿ ಶೇ.99.81, ಚಿತ್ರದುರ್ಗ ಶೇ.99.88, ಶಿವಮೊಗ್ಗ ಶೇ.99.86, ದಕ್ಷಿಣ ಕನ್ನಡ ಶೇ.99.71, ಚಿಕ್ಕಮಗಳೂರು 99.78, ಹಾಸನ ಶೇ.99.78, ತುಮಕೂರು ಶೇ.99.78, ಮಂಡ್ಯ ಶೇ.99.85, ಬೆಂಗಳೂರು ನಗರ ಶೇ.99.86, ಬೆಂಗಳೂರು ಗ್ರಾಮಾಂತರ ಶೇ.99.90, ಕೋಲಾರ ಶೇ.99.96, ಕೊಡಗು ಶೇ.99.70, ಮೈಸೂರು ಶೇ.99.73.
ಪರಿಷತ್ ಚುನಾವಣೆಗೆ ಹಕ್ಕು ಚಲಾಯಿಸಿದ ನಾಯಕರು
ವಿಧಾನ ಪರಿಷತ್ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ದಾವಣಗೆರೆಯ ಬಿಜೆಪಿ ಮತ್ತು ಕಾಂಗ್ರೆಸ್ನ ನಾಯಕರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆ ಸಂಖ್ಯೆ 66ಕ್ಕೆ ಆಗಮಿಸಿದ ನಾಯಕರು ಮತದಾನ ಮಾಡಿದರು.
ಜಿಎಂಐಟಿ ಅತಿಥಿ ಗೃಹದಲ್ಲಿ ಸೇರಿದ್ದ ಬಿಜೆಪಿಯ ಮತದಾರರು ಬೆಳಗ್ಗೆ ಅಲ್ಲಿಂದ ನೇರವಾಗಿ ಮಹಾನಗರ ಪಾಲಿಕೆಗೆ ಬಂದು ಮತ ಹಾಕಿದರು.
ಪಾಲಿಕೆಯ 27 ಸದಸ್ಯರ ಜತೆಗೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಎಂಎಲ್ಸಿ ಗಳಾದ ರವಿಕುಮಾರ್, ಕೆ.ಪಿ. ನಂಜುಂಡಿ, ಲೇಹರ್ ಸಿಂಗ್, ತೇಜಸ್ವಿನಿ ಅವರೂ ಹಕ್ಕು ಚಲಾಯಿಸಿದರು. ಕೆಲ ಹೊತ್ತಿನ ನಂತರ ವಿಧಾನಪರಿಷತ್ನ ಇನ್ನಿಬ್ಬರು ಸದಸ್ಯರಾದ ಚಿದಾನಂದಗೌಡ ಮತ್ತು ಆರ್. ಶಂಕರ್ ಮತದಾನ ಮಾಡಿದರು.
ಮಧ್ಯಾಹ್ನ ಕಾಂಗ್ರೆಸ್ ಪಾಳೆಯದವರು ಮತಗಟ್ಟೆಗೆ ಬಂದರು. ಶಾಸಕ ಶಾಮನೂರು ಶಿವಶಂಕರಪ್ಪ, ಎಂಎಲ್ಸಿಗಳಾದ ಯು.ಬಿ. ವೆಂಕಟೇಶ, ಮೋಹನ್ ಕೊಂಡಜ್ಜಿ ಹಾಗೂ ಪಾಲಿಕೆಯ 22 ಸದಸ್ಯರು ಮತ ಚಲಾಯಿಸಿದರು. ವಿಧಾನ ಪರಿಷತ್ನ ಇನ್ನೊಬ್ಬ ಸದಸ್ಯ ರಘು ಆಚಾರ್ ಗೈರು ಹಾಜರಾಗಿದ್ದರು.
ವಿಧಾನ ಪರಿಷತ್ತಿನ ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮತದಾನದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರೂ ಸಹ, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಈ ಬಾರಿ ಬಿಜೆಪಿ ವಿರುದ್ಧ ಜನರ ಮನೋಭಾವ ಇದೆ ಎಂದಿದ್ದಾರೆ.
ಬಹುತೇಕ ಕಡೆಗಳಲ್ಲಿ ಬೆಳಿಗ್ಗೆ ಮತದಾನದ ಪ್ರಮಾಣ ಕಡಿಮೆಯಾಗಿತ್ತು. ಮಧ್ಯಾಹ್ನ 12 ಗಂಟೆಯವರೆಗೆ ಶೇ.27.72ರಷ್ಟು ಜನರು ಮಾತ್ರ ಮತದಾನ ಮಾಡಿದ್ದರು. ಸಂಜೆಯಾದಂತೆ ಮತದಾನ ಚುರುಕು ಪಡೆದುಕೊಂಡಿದೆ.
ಮತದಾನದ ವಿವರ : ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ 185 ಪುರುಷ, 201 ಮಹಿಳೆಯರು ಸೇರಿದಂತೆ ಎಲ್ಲ 386 ಮತದಾರರು ಮತ ಚಲಾಯಿಸಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 685 ಮತದಾರರ ಪೈಕಿ 332 ಪುರುಷ, 351 ಮಹಿಳೆ ಸೇರಿದಂತೆ ಒಟ್ಟು 683 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಗಳೂರು ತಾಲ್ಲೂಕಿನಲ್ಲಿ ಒಟ್ಟು 417 ಮತದಾರರ ಪೈಕಿ 195 ಪುರುಷ, 221 ಮಹಿಳೆ ಸೇರಿದಂತೆ ಒಟ್ಟು 416 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ 1488 ಮತದಾರರ ಪೈಕಿ 712 ಪುರುಷ, 773 ಮಹಿಳೆ ಸೇರಿದಂತೆ ಒಟ್ಟು 1485 ಮತಗಳು ಚಲಾವಣೆಗೊಂಡಿವೆ.
ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಗೆ ಬರುವ ಚನ್ನಗಿರಿ ತಾಲ್ಲೂಕಿನಲ್ಲಿ ಒಟ್ಟು 759 ಮತದಾರರ ಪೈಕಿ 362 ಪುರುಷ, 396 ಮಹಿಳೆ ಸೇರಿದಂತೆ ಒಟ್ಟು 758 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 343 ಮತದಾರರ ಪೈಕಿ 162 ಪುರುಷ, 182 ಮಹಿಳೆ ಸೇರಿದಂತೆ ಒಟ್ಟು 342 ಮತದಾರರು ಮತ ಚಲಾಯಿಸಿದ್ದಾರೆ. ನ್ಯಾಮತಿ ತಾಲ್ಲೂಕಿನಲ್ಲಿ 190 ಮತದಾರರ ಪೈಕಿ 86 ಪುರುಷ, 104 ಮಹಿಳೆಯರು ಸೇರಿದಂತೆ ಎಲ್ಲ 190 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟಾರೆ 1292 ಮತದಾರರ ಪೈಕಿ 610 ಪುರುಷ, 680 ಮಹಿಳೆ ಸೇರಿದಂತೆ ಒಟ್ಟು 1290 ಮತಗಳು ಚಲಾವಣೆಗೊಂಡಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.