ದೇಶದ ಯಾವುದೇ ಸರ್ಕಾರ ಸುಭದ್ರ, ನಿಷ್ಪಕ್ಷಪಾತ, ಸ್ವತಂತ್ರ ನ್ಯಾಯಾಡಳಿತ ಒದಗಿಸದ ಕಾರಣ 70 ವರ್ಷಗಳಾದರೂ ದೇಶ ಮುಂದುವರೆದಿಲ್ಲ : ಬಿದರಿ
ದಾವಣಗೆರೆ, ಸೆ. 26 – ಆಡಳಿತದ ಚುಕ್ಕಾಣಿ ಹಿಡಿದಿರುವವರು ಸುಭದ್ರ, ನಿಷ್ಪಕ್ಷಪಾತ ಹಾಗೂ ಸ್ವತಂತ್ರ ನ್ಯಾಯಾಡಳಿತ ಒದಗಿಸಲು ಸಾಧ್ಯವಾಗದೇ ದೇಶ ಮುಂದುವರೆದಿಲ್ಲ ಎಂದಿರುವ ನಿವೃತ್ತ ಡಿಜಿಪಿ ಡಾ. ಶಂಕರ ಮಹಾದೇವ ಬಿದರಿ, ನ್ಯಾಯಾಡಳಿತ ವ್ಯವಸ್ಥೆ ಬದಲಾಗದಿದ್ದರೆ ದೇವರೇ ಬಂದು ಪ್ರಧಾನ ಮಂತ್ರಿಯಾದರೂ ದೇಶ ಬದಲಾಗುವುದಿಲ್ಲ ಎಂದಿದ್ದಾರೆ.
ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅರುಣ ಟಾಕೀಸ್ ಸರ್ಕಲ್ನಲ್ಲಿನ ಹಳೇ ಡಿ.ಎ.ಆರ್. ಕಚೇರಿ ಹಿಂಭಾಗ ನಿರ್ಮಿಸಲಾಗಿರುವ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಭವನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್, ಬಿಜೆಪಿ ಸೇರಿದಂತೆ, ಎಲ್ಲ ಪಕ್ಷಗಳ ಸರ್ಕಾರ ಬಂದರೂ ನ್ಯಾಯದಾನ ವ್ಯವಸ್ಥೆ ಬಲಿಷ್ಠ ಮಾಡಲು ಹಸ್ತಕ್ಷೇಪ ಇಲ್ಲದ ನಿಷ್ಪಕ್ಷಪಾತ ಪೊಲೀಸ್ ವ್ಯವಸ್ಥೆ ರೂಪಿಸುತ್ತಿಲ್ಲ ಎಂದವರು ವಿಷಾದಿಸಿದ್ದಾರೆ.
ತಪ್ಪು ಮಾಡಿದವರಿಗೆ ಒಂದೆರಡು ವರ್ಷಗಳಲ್ಲಿ ಶಿಕ್ಷೆಯಾಬೇಕು. ಆದರೆ, ದೇಶದಲ್ಲಿ ಸೈಕಲ್ ಕದ್ದವನಿಗೆ ಶಿಕ್ಷೆ ಆಗುತ್ತಿದೆ. ದೊಡ್ಡ ಹಗರಣ ಮಾಡಿದವರಿಗೆ ಶಿಕ್ಷೆ ಆಗುತ್ತಿಲ್ಲ. ಈ ರೀತಿಯ ಕಾನೂನು ವ್ಯವಸ್ಥೆ ಇರುವವರೆಗೂ ತಿರುಪತಿ ತಿಮ್ಮಪ್ಪ, ಶ್ರೀಶೈಲ ಮಲ್ಲಿಕಾರ್ಜುನ, ಕಾಶಿ ವಿಶ್ವನಾಥ, ಕೇದಾರನಾಥ, ಬದರೀನಾಥ ಬಂದು ಪ್ರಧಾನ ಮಂತ್ರಿ ಆದರೂ ದೇಶ ಬದಲಾಗಲ್ಲ ಎಂದವರು ನೇರವಾಗಿ ಹೇಳಿದ್ದಾರೆ.
ಅಮರಿಕ ಹಾಗೂ ಬ್ರಿಟನ್ ಸೇರಿದಂತೆ ಪ್ರಗತಿ ಹೊಂದಿದ ದೇಶಗಳಲ್ಲಿ ಪೊಲೀಸ್ ಕೆಲಸದಲ್ಲಿ ಬೇರೆಯವರು ಕೈ ಹಾಕುವುದಿಲ್ಲ. ಭಾರತದಲ್ಲೂ ಸುಭದ್ರ, ನಿಷ್ಪಕ್ಷಪಾತ, ಸ್ವತಂತ್ರ ನ್ಯಾಯಾಡಳಿತ ಮಾಡಲು ಸಾಧ್ಯವಾಗಬೇಕಿದೆ. ಪೊಲೀಸ್, ಪ್ರಾಸಿಕ್ಯೂಷನ್, ನ್ಯಾಯಾಂಗ ಹಾಗೂ ಬಂಧೀಖಾನೆ ಎಂಬ ನ್ಯಾಯದ ನಾಲ್ಕು ಗಾಲಿಗಳನ್ನು ಬಲಪಡಿಸಬೇಕಿದೆ ಎಂದು ಬಿದರಿ ಹೇಳಿದರು.
ಪೊಲೀಸ್ ಪೋಸ್ಟಿಂಗ್ಗೆ ಕೋಟಿಗಳ ಹಣ
ಪೊಲೀಸ್ ಅಧಿಕಾರಿಗಳಿಗೆ ವರ್ಷದ ಅವಧಿಗೆ ಹುದ್ದೆ ನೀಡಲಾಗುತ್ತಿದೆ. ಹೀಗಾದರೆ ಕೆಲಸ ಮಾಡುವುದು ಹೇಗೆ? ಈ ವರ್ಗಾವಣೆಗೂ ಕೋಟಿಗಟ್ಟಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಶಂಕರ್ ಬಿದರಿ ಹೇಳಿದರು.
ರಾಜಕಾರಣಿಗಳು ಭ್ರಷ್ಟಾಚಾರ ಮಾಡು ವುದರಿಂದ, ಪೋಸ್ಟಿಂಗ್ಗಾಗಿ ಪೊಲೀಸರು ಹಣ ನೀಡುವ ಪರಿಸ್ಥಿತಿ ಬಂದಿದೆ. ಇಂತಹ ಮೂರ್ಖರ ಕಾರಣದಿಂದ ಹೆಸರು ನಿಮ್ಮದು ಬಸಿರು ಅವರದು ಎಂಬಂತಾಗಿದೆ ಎಂದು ಬಿದರಿ ಕಟುವಾಗಿ ಹೇಳಿದರು.
ಬೆಂಗಳೂರಿನಲ್ಲಿ ಒಂದು ಪೋಸ್ಟಿಂಗ್ಗೆ 1 ಕೋಟಿ ರೂ.ಗಳವರೆಗೂ ಹಣ ನೀಡಲಾಗುತ್ತಿದೆ. ಬೇರೆ ಕಡೆ 30 ಲಕ್ಷ ರೂ. ಇದ್ದರೂ ಇರಬಹುದು. ಈ ಹಣವೂ ರಾಜಕಾರಣಿಗಳ ಬಳಿ ಉಳಿಯುವುದಿಲ್ಲ, ಚುನಾವಣೆ ಬಂದಾಗ ಹಣ ಹರಿದು ಹೋಗುತ್ತದೆ.
ಈ ಬಗ್ಗೆ ಮುಕ್ತವಾಗಿ ಮಾತನಾಡಬೇಕಿದೆ. ಎಷ್ಟು ದಿನ ರೋಗವನ್ನು ಮುಚ್ಚಿಡಬೇಕು? ಈ ರೋಗಕ್ಕೆ ಜನರೇ ಮದ್ದು ನೀಡಬೇಕಾಗಿದೆ. ಹೀಗಾಗಿ ವಾಸ್ತವ ವಿಷಯವನ್ನು ಜನರಿಗೆ ತಿಳಿಸಬೇಕಿದೆ ಎಂದವರು ಹೇಳಿದರು.
ಪ್ರತಿ ಜಿಲ್ಲೆಯಲ್ಲೂ ನಿವೃತ್ತರಿಗೆ ಭವನ, ಆರೋಗ್ಯ ಕಾಳಜಿ
ನಿವೃತ್ತ ಪೊಲೀಸರ ಕಲ್ಯಾಣಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿ ಹಂತದ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಹಾಗೂ ಪ್ರತಿ ಜಿಲ್ಲೆಯಲ್ಲಿ ನಿವೃತ್ತ ಪೊಲೀಸರಿಗೆ ಭವನ ನಿರ್ಮಿಸಬೇಕು ಎಂದು ಮಾಜಿ ಡಿಜಿಪಿ ಡಾ. ಶಂಕರ್ ಮಹಾದೇವ ಬಿದರಿ ಅಭಿಪ್ರಾಯ ಪಟ್ಟಿದ್ದಾರೆ.
ಸೈನಿಕರು ಅಪರೂಪಕ್ಕೆ ಯುದ್ಧ ಮಾಡುತ್ತಾರೆ. ಪೊಲೀಸರು ಪ್ರತಿನಿತ್ಯ ಯುದ್ಧ ಎದುರಿಸುತ್ತಾರೆ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಕೇಂದ್ರ ಸರ್ಕಾರದ ಸಿ.ಜಿ.ಹೆಚ್.ಎಸ್. ಮಾದರಿಯಲ್ಲಿ ಪೊಲೀಸರಿಗೆ ಆರೋಗ್ಯ ಸೌಲಭ್ಯ ಕಲ್ಬಿಸಬೇಕು ಎಂದವರು ಆಗ್ರಹಿಸಿದರು.
ಪೊಲೀಸ್ ಹಾಗೂ ಕಂದಾಯ ಇಲಾಖೆಯನ್ನು ರಾಜಕಾರಣಿಗಳು §ಅಭಿವೃದ್ಧಿ ಕೆಲಸ¬ಗಳಿಂದ ಹೊರಗಿಡಿ. ಆಗ ನ್ಯಾಯದಾನ ಬಲವಾಗುತ್ತದೆ. ಅಂತಹ ವ್ಯವಸ್ಥೆ ಜಾರಿಗೆ ತಂದು, ನಂತರದಲ್ಲೂ ಪೊಲೀಸರು ತಪ್ಪು ಮಾಡಿದರೆ ಕಠಿಣ ಶಿಕ್ಷೆ ಕೊಡಿ ಎಂದವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಪೊಲೀಸ್ ಕೆಲಸ ಗೌರವದ ಜವಾಬ್ದಾರಿಯಾಗಿದೆ. ದಿನದ 24 ಗಂಟೆಗಳ ಕಾಲವೂ ಕಾನೂನು ವ್ಯವಸ್ಥೆ ಕಾಯ್ದುಕೊಳ್ಳದೇ ಹೋದರೆ, ಯಾರ ತಲೆ ಎಲ್ಲೋ ಹೋಗುವ ಪರಿಸ್ಥಿತಿ ಆಗುತ್ತದೆ. ಇಂದಿನ ದಿನಗಳಲ್ಲಿ ಪೊಲೀಸರಿಗೆ ಸಿಗುವ ಸೌಲಭ್ಯಗಳೂ ಹೆಚ್ಚಾಗಿವೆ ಎಂದು ಹೇಳಿದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಪೊಲೀಸರು ಭಾಷೆ ಸುಧಾರಿಸಿಕೊಳ್ಳಬೇಕು. §ಪೊಲೀಸ್ ಭಾಷೆ¬ ಎಂಬ ಟೀಕೆ ತಪ್ಪಿಸಲು ಪೊಲೀಸರು ಹಗುರ ಮಾತುಗಳನ್ನು ಬಳಸಬಾರದು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿದರು.
ಈ ಸಂದರ್ಭದಲ್ಲಿ ಭವನ ನಿರ್ಮಾಣಕ್ಕೆ ನೆರವಾದ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಎನ್. ಲಿಂಗಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಜಿ.ಕೆ. ಬಸವರಾಜಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಎನ್. ನಾಗರಾಜ್, ಸಂಘದ ಮಾಜಿ ಕಾರ್ಯದರ್ಶಿ ಕುಮಾರ್ ಎಸ್. ಕರ್ನಿಂಗ್, ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಂ.ಎಸ್ ಶಿವಾಚಾರ್ಯ, ಬಿ.ಬಿ. ಸಕ್ರಿ ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ಉಪಾಧ್ಯಕ್ಷ ರವಿನಾರಾಯಣ ಸ್ವಾಗತಿಸಿದರು.