ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ
ದಾವಣಗೆರೆ, ಡಿ.10- ಅಸಮಾನತೆಯನ್ನು ಅಳಿಸಿ, ಸಮಾನತೆಯ ಸಮಾಜ ನಿರ್ಮಾಣ ಮಾಡುವ ಧ್ಯೇಯ ವಾಕ್ಯದೊಂದಿಗೆ ಸಾಗುವ ಮೂಲಕ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಕರೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಘೋಷಣೆ ಒಂದು ಐತಿಹಾಸಿಕ ಮುನ್ನುಡಿಯಾಗಿದ್ದು ಜಾತಿ, ಧರ್ಮ, ವರ್ಗ, ರಾಷ್ಟ್ರೀಯತೆ ಭೇದವನ್ನು ಅಳಿಸಿ, ಮಾನವ ಕುಲದ ಘನತೆಗೆ ಮಾನವ ಹಕ್ಕುಗಳು ಸಹಕಾರಿಯಾಗಿವೆ. ಮಾನವ ಹಕ್ಕುಗಳ ಅಡಿಯಲ್ಲಿ ಹಲವಾರು ಕಾನೂನು ಒಳಂಬಡಿಕೆಗಳು ಮತ್ತು ಜಾಗತಿಕ ಘೋಷಣೆಗಳು ಜಾರಿಗೆ ಬಂದಿದ್ದು, ಅವುಗಳ ಸಮರ್ಪಕ ಅನುಷ್ಠಾನ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್. ಶ್ರೀಪಾದ್ ಮಾತನಾಡಿ, ಮಾನವ ಹಕ್ಕುಗಳು ಮೂಲಭೂತ ಹಕ್ಕುಗಳಾಗಿದ್ದು, ನಮ್ಮ ಸಂವಿಧಾನದಲ್ಲಿ ಅವುಗಳನ್ನು ಸೇರಿಸಲಾಗಿದೆ. ಮಾನವ ಹಕ್ಕುಗಳು ನೈಸರ್ಗಿಕ ಹಕ್ಕುಗಳಾಗಿದ್ದು, ಹುಟ್ಟಿನೊಂದಿಗೆ ಬರುವ ಹಕ್ಕುಗಳಾಗಿವೆ. ಜನಾಂಗೀಯ ಭೇದವನ್ನು ಅಳಿಸಿ, ಮಾನವತೆಯ ತಳಹದಿಯ ಮೇಲೆ ಸಮ ಸಮಾಜ ನಿರ್ಮಿಸುವ ಮೂಲಕ ನಾವೆಲ್ಲರೂ ಮಾನವ ಹಕ್ಕುಗಳಿಗೆ ಗೌರವ ನೀಡಬೇಕು. ಎಲ್ಲಾ ಕಾನೂನುಗಳಿಗೂ ಹಾಗೂ ತೀರ್ಪುಗಳಿಗೂ ಮಾನವ ಹಕ್ಕುಗಳು ಪ್ರೇರಣೆಯಾಗಿದ್ದು, ಅವುಗಳ ಉಲ್ಲಂಘನೆ ಆಗದಂತೆ ತಡೆಯುವ ಅನಿವಾರ್ಯತೆ ಸಮಾಜದ ಮೇಲಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ ನಾಯಕ್ ಮಾತನಾಡಿ, ಮಾನವ ಹಕ್ಕುಗಳ ವ್ಯಾಪ್ತಿ ಅತ್ಯಂತ ವ್ಯಾಪಕವಾಗಿದ್ದು, ಶೀಘ್ರ ನ್ಯಾಯದಾನ ಮಾಡುವುದು ಸಹ ಮಾನವ ಹಕ್ಕಾಗಿದ್ದು, ಆ ನಿಟ್ಟಿನಲ್ಲಿ ಲೋಕ್ ಅದಾಲತ್ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಹಿರಿಯ ವಕೀಲ ಎಲ್.ಹೆಚ್. ಅರುಣ್ಕುಮಾರ್ ಮಾತನಾಡಿ, ಕಳೆದ ಏಳು ದಶಕಗಳಿಂದ ಮುಕ್ತ ಮತ್ತು ಪ್ರಜಾಸತ್ತಾತ್ಮಕ ಜಗತ್ತಿನಲ್ಲಿ ಮಾನವ ಹಕ್ಕುಗಳು ಶಕ್ತಿಶಾಲಿಯಾಗಿ ಮಿಡಿಯುತ್ತಾ ಬಂದಿದೆ. ಪ್ರತಿಯೊಬ್ಬ ನಾಗರಿಕರನ್ನು ಶೋಷಣೆ, ಅನ್ಯಾಯ ಮತ್ತು ದಬ್ಬಾಳಿಕೆಗಳಿಂದ ರಕ್ಷಿಸುವ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವಲ್ಲಿ ನಿರತವಾಗಿದೆ. ಇಂದಿನ ಸಂದರ್ಭದಲ್ಲಿ ಆಹಾರ, ವಸತಿ, ಉದ್ಯೋಗ ಹಾಗೂ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕುಗಳಾಗಿ ಘೋಷಣೆ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಕೌಟುಂಬಿಕ ನ್ಯಾಯಾಲದ ನ್ಯಾಯಾಧೀಶ ಬಿ. ದಶರಥ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಲ್.ಹೆಚ್. ಪ್ರದೀಪ್, ಸಹಕಾರ್ಯದರ್ಶಿ ಜಿ.ಕೆ. ಬಸವರಾಜ್, ಕೆ.ಎಸ್. ರೇಖಾ ಸೇರಿದಂತೆ ಸಂಘದ ಪದಾಧಿಕಾರಿಗಳು, ವಕೀಲರು ಇದ್ದರು.