ಈಡಿಗ ಸಮುದಾಯದ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಮುದಾಯದ ಗ್ರಾ.ಪಂ. ಸದಸ್ಯರ ರಾಜೀನಾಮೆ

ಈಡಿಗ ಸಮುದಾಯದ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಮುದಾಯದ ಗ್ರಾ.ಪಂ. ಸದಸ್ಯರ ರಾಜೀನಾಮೆ - Janathavaniಸರ್ಕಾರಕ್ಕೆ ಶ್ರೀ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ

ದಾವಣಗೆರೆ, ಡಿ.12- ಈಡಿಗ ಸಮುದಾಯದ ಅಭಿವೃದ್ಧಿಗಾಗಿ ನಿಗಮ, ಮಂಡಳಿ ರಚಿಸಿ 500 ಕೋಟಿ ಮೀಸಲಿಡುವುದು ಸೇರಿದಂತೆ, ವಿವಿಧ ಬೇಡಿಕೆಗಳನ್ನು ಬರುವ ಜನವರಿ 18ರೊಳಗಾಗಿ ಈಡೇರಿಸುವಂತೆ ಸರ್ಕಾರಕ್ಕೆ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಶ್ರೀ ಪ್ರಣವಾನಂದ ಸ್ವಾಮೀಜಿ ಗಡುವು ನೀಡಿದ್ದಾರೆ.

ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆ ಹೊಂದಿರುವ ಈಡಿಗ ಸಮುದಾಯ ಸೇಂದಿ ಇಳಿಸುವುದನ್ನೇ ಕುಲಕಸುಬಾಗಿ ಮಾಡಿಕೊಂಡಿತ್ತು. ಆದರೆ, 2001ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಬಕಾರಿ ಮಂತ್ರಿಯಾಗಿದ್ದಾಗ ಕಲ್ಬುರ್ಗಿ, ಯಾದಗಿರಿಯಲ್ಲಿ ಸೇಂದಿ ಇಳಿಸುವುದನ್ನು ಬ್ಯಾನ್ ಮಾಡಿದ್ದರು. ಅಂದಿನಿಂದ ನಮ್ಮ ಸಮುದಾಯದವರು ಕಸುಬು ಇಲ್ಲದೇ ಬೀದಿಗೆ ಬಿದ್ದಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು, ಸೇಂದಿ ಇಳಿಸುವ ಅವಕಾಶ ಮತ್ತೆ ಈಡಿಗರಿಗೆ ಕಲ್ಪಿಸಿಕೊಡಬೇಕು. ಮಹಾಮಂಡಳದಿಂದ ಜನವರಿ 18ರಂದು ಯಾದಗಿರಿಯಲ್ಲಿ ಬೃಹತ್ ಸಭೆ ನಡೆಸಲಾಗುತ್ತಿದ್ದು, ಅಷ್ಟರೊಳಗಾಗಿ ಸರ್ಕಾರ ನಮ್ಮ ಸಮುದಾಯದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ರಾಜ್ಯದಲ್ಲಿರುವ ನಮ್ಮ ಸಮುದಾಯದ 600 ಗ್ರಾಮ ಪಂಚಾಯತ್ ಸದಸ್ಯರು ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ಸಮುದಾಯದ ಏಳು ಮಂದಿ ಶಾಸಕರಿದ್ದು, ಇಬ್ಬರು ಪ್ರಭಾವಿ ಸಚಿವರಿದ್ದಾರೆ. ಆದರೆ, ಅವರು ಸಮುದಾಯದ ಅಭಿವೃದ್ಧಿಗಾಗಿ ಗಮನ ಹರಿಸಿಲ್ಲ. ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಸಮುದಾಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬೇಡಿಕೆಗಳನ್ನು ಈಡೇರಿಸುವಂತೆ ಧ್ವನಿ ಎತ್ತಬೇಕು. ಇಲ್ಲವಾದರೆ ನಮ್ಮ ಸಮುದಾಯಕ್ಕೆ ಸೌಲಭ್ಯ, ಅಭಿವೃದ್ಧಿಗೆ ಸಹಕರಿಸುವ ಇತರೆ ಸಮಾಜದ ಸಚಿವರು, ಶಾಸಕರ ಪರವಾಗಿ ಮುಂದಿನ ಚುನಾವಣೆಯಲ್ಲಿ ನಿಲ್ಲಬೇಕಾಗಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಹೆಚ್.ವೈ. ಆನಂದ್, ಪ್ರಕಾಶ್, ಶಿವರಾಜ್, ಪರಶುರಾಮ್ ಇದ್ದರು.

error: Content is protected !!