ಹೊಸ ಆಲೋಚನೆ, ಪ್ರಯೋಗಗಳಿಂದ ಅಸ್ತಿತ್ವ ಗುರುತಿಸಿಕೊಳ್ಳಿ

`ಜಂಗ್ಲಿ ಕುಲಪತಿಯ ಜಂಗ್ಲೀ ಕಥೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆದಿವಾಸಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ ಸಲಹೆ

ದಾವಣಗೆರೆ, ಡಿ.10- ವಿದ್ಯಾರ್ಥಿಗಳು ವಿಭಿನ್ನ ಆಲೋಚನೆ, ಹೊಸ ಪ್ರಯೋಗಗಳ ಮೂಲಕ ತಮ್ಮ ಅಸ್ತಿತ್ವ ಗುರುತಿಸಿಕೊಳ್ಳಲು ಮುಂದಾಗಬೇಕು ಎಂದು ಆಂಧ್ರಪ್ರದೇಶದ ಆದಿವಾಸಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ತಾವು ಬರೆದ ‘ಜಂಗ್ಲಿ ಕುಲಪತಿಯ ಜಂಗ್ಲೀ ಕಥೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಅನುಭವವುಳ್ಳ ಜ್ಞಾನ, ಶ್ರಮವಹಿಸಿ ಗಳಿಸಿದ ಸಂಪತ್ತು ವ್ಯಕ್ತಿಯ ವ್ಯಕ್ತಿತ್ವ ಗುರುತಿಸುವ ವಿಶೇಷ ಗುಣಗಳು. ಆ ಗುಣಗಳೇ ವ್ಯಕ್ತಿಯನ್ನು ಎತ್ತರೆತ್ತರಕ್ಕೆ ಒಯ್ಯುವ ಮೆಟ್ಟಿಲಾಗುತ್ತವೆ. ಇದನ್ನು ಕಲಿಯಲು ನಾವು ಜಗತ್ತಿನ ಸಾಧಕರನ್ನು ನೋಡಿ ಕಲಿಯಬೇಕಾಗಿಲ್ಲ. ನಮ್ಮ ಸುತ್ತಲಿನ ಜನರ ಸಾಧನೆಯನ್ನೇ ಪ್ರೇರಣೆಯಾಗಿ ಪಡೆದುಕೊಳ್ಳಬೇಕು. ಅವರೇ ನಮಗೆ ಸ್ಫೂರ್ತಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳಿಗೆ ತಮ್ಮೂರಿನ ಮಹತ್ವದ ಅರಿವು ಇರಬೇಕು. ತಮ್ಮೂರಿನ ಸಾಧಕರ ಬಗ್ಗೆ ತಿಳಿವಳಿಕೆ ಅಗತ್ಯ. ಊರು ಕಟ್ಟಿದವರ ಕೊಡುಗೆ ಏನೆಂಬುದನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಊರಿನ ಬೆಳವಣಿಗೆಯ ಜೊತೆಗೆ ಸಮಾಜದ ಮತ್ತು ಜನರ ಅಭಿವೃದ್ಧಿಯನ್ನೂ ಕಾಣುವುದು ಹಾಗೂ ಅದನ್ನು ಬೆಳಕಿಗೆ ತರುವ ಕೆಲಸವನ್ನು ವಿದ್ಯಾರ್ಥಿಗಳ ಮೂಲಕ ಮಾಡಿಸುವುದೇ ವಿಶ್ವವಿದ್ಯಾನಿಲಯಗಳು ಮಾಡಬೇಕಾದ ಕಾರ್ಯ ಎಂದು ನುಡಿದರು.

ಪುಸ್ತಕ ಕುರಿತು ಮಾತನಾಡಿದ ಪತ್ರಕರ್ತ ಬಿ.ಎನ್. ಮಲ್ಲೇಶ್, ಹೋರಾಟದ ಹಾದಿ ಸುಲಭವಾಗಿ ಕಾಣುತ್ತದೆ. ಆದರೆ ಅದರೊಳಗಿನ ಅಡೆತಡೆಗಳನ್ನು ಹಿಮ್ಮೆಟ್ಟಿಸಿ ಮುನ್ನುಗ್ಗಿದಾಗ ಯಶಸ್ಸಿನ ಜೊತೆಗೆ ಸಮಾಜ ಗುರುತಿಸುತ್ತದೆ. ಆ ಕೆಲಸವನ್ನು ಪ್ರೊ. ಕಟ್ಟಿಮನಿ ಅವರು ಎಲ್ಲರಿಗೂ ಮಾದರಿಯಾಗುವಂತೆ ಮಾಡಿ ತೋರಿಸಿದ್ದಾರೆ ಎಂದು ನುಡಿದರು.

ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ವ್ಯಕ್ತಿಯ ಗುಣ, ಆಚಾರ, ವಿಚಾರ ಮತ್ತು ಮಾಡುವ ಕಾಯಕಗಳ ಮೂಲಕ ಸಾಮಾನ್ಯನೂ ದೈವತ್ವದ ಸ್ಥಾನ ಪಡೆಯಬಲ್ಲ ಎಂದರು.

ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಎಂ. ಕೊಟ್ರೇಶ,  ನಿವೃತ್ತ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಪತ್ರಕರ್ತ ಜಿ.ಎನ್. ಮೋಹನ್, ಸಿಂಡಿಕೇಟ್ ಸದಸ್ಯ ಡಾ. ಜಿ.ಪಿ.ರಾಮನಾಥ ಮಾತನಾಡಿದರು. ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಸ್ವಾಗತಿಸಿದರು. ಡಾ. ಶಿವಕುಮಾರ ಕಣಸೋಗಿ ವಂದಿಸಿದರು. ಡಾ. ಭೀಮಾಶಂಕರ ಜೋಶಿ ನಿರೂಪಿಸಿದರು.

error: Content is protected !!