ದಾವಣಗೆರೆ, ಸೆ.21- ಕೋವಿಡ್ ಹಿನ್ನೆಲೆಯಲ್ಲಿ ನನ್ನ ಜನ್ಮದಿನಕ್ಕೆ ನೀವು ಇದ್ದಲ್ಲಿಂದಲೇ ಶುಭ ಹಾರೈಸಿ, ಹರಸಿ. ಅದೇ ನನಗೆ ಶ್ರೀರಕ್ಷೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಮ್ಮ ಅಭಿಮಾನಿಗಳು, ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ.
ಇದೇ 22ರಂದು ಎಸ್ಸೆಸ್ಸೆಂ ಅವರ ಜನ್ಮದಿನವಿದ್ದು, ಮುನ್ನಾ ದಿನವಾದ ಇಂದು ನಗರದ ಕಲ್ಲೇಶ್ವರ ಮಿಲ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಕೋವಿಡ್ ಹಿನ್ನೆಲೆಯಲ್ಲಿ ಜನಸಂದಣಿ ಸೂಕ್ತವಲ್ಲ. ಆದ್ದರಿಂದ ಜನ್ಮದಿನದ ಶುಭಾಶಯ ಕೋರಲು ಮನೆ ಮುಂದೆ ಹೆಚ್ಚು ಜನ ಸೇರಿ ಜನಸಂದಣಿ ಆಗಬಾರದು. ಕೋವಿಡ್ ನಿಯಮ ಪಾಲನೆಗೆ ಒತ್ತು ನೀಡಿ ಎಂದು ಮನವಿ ಮಾಡಿದರು.
ನಿಮ್ಮೆಲ್ಲರ ಹಾರೈಕೆ ಹಾಗೂ ಶುಭಾಶಯಗಳು ಸದಾ ನನ್ನ ಜೊತೆ ಇದ್ದೇ ಇರುತ್ತವೆ ಎಂದು ನಂಬಿದ್ದೇನೆ. ಗುಂಪು-ಗುಂಪಾಗಿ ಬರದೆ ನೀವು ಇದ್ದ ಕಡೆಯಿಂದಲೇ ನನಗೆ ಶುಭ ಹಾರೈಸಬೇಕೆಂದು ವಿನಂತಿಸಿದರು.
ಪರಸ್ಪರ ಅಂತರ ಕಾಪಾಡುವುದು ಜವಾಬ್ದಾರಿಯಾಗಿರುವುದರಿಂದ ಅದನ್ನು ಪಾಲಿಸೋಣ. ಹಾರ-ತುರಾಯಿಗಳಿಗಿಂತ ನಿಮ್ಮ ಹೃದಯಾಳದ ಹಾರೈಕೆ ನನಗೆ ಶ್ರೀರಕ್ಷೆ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.