ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕುರಿತ ಕಾರ್ಯಾಗಾರದಲ್ಲಿ ವಿಟಿಯು ಉಪಕುಲಪತಿ ಡಾ.ಕರಿಸಿದ್ದಪ್ಪ
ದಾವಣಗೆರೆ, ಡಿ.10- ನೂತನ ಶಿಕ್ಷಣ ನೀತಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಶಿಕ್ಷಕರ ಪಾತ್ರ ಮಹತ್ವದ್ದು. ನೂತನ ನೀತಿಯ ಒಳಹರಿವುಗಳನ್ನು ಅರ್ಥ ಮಾಡಿಕೊಂಡು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಉಪಕುಲಪತಿ ಡಾ.ಕರಿಸಿದ್ದಪ್ಪ ಹೇಳಿದರು.
ನಗರದ ಬಿಐಇಟಿ ಕಾಲೇಜಿನ ಎಸ್ಎಸ್ ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ಶುಕ್ರ ವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕುರಿತ ಎರಡು ದಿನಗಳ ಕಾರ್ಯಾ ಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿಯೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದಿದ್ದು ಕರ್ನಾಟಕದಲ್ಲಿ. ಮುಖ್ಯ ಮಂತ್ರಿಗಳು, ಶಿಕ್ಷಣ ಸಚಿವರು ಹಾಗೂ ಎಲ್ಲಾ ವಿಶ್ವ ವಿದ್ಯಾನಿಲಯಗಳ ಕುಲಪತಿಗಳು ನೂತನ ನೀತಿ ಯನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದಾರೆ ಎಂದರು.
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎ.ಎಸ್. ದೇಶ ಪಾಂಡೆ ಮಾತನಾಡುತ್ತಾ, ದೇಶದಲ್ಲಿನ 850ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು, 40 ಸಾವಿರ ಶಿಕ್ಷಣ ಸಂಸ್ಥೆಗಳ ಪೈಕಿ ಸುಮಾರು 15 ಸಾವಿರ ಕಾಲೇಜುಗಳು ಮಾತ್ರ ಉತ್ತಮ ಶಿಕ್ಷಣ ನೀಡುತ್ತಿವೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಜನ ಸಂಖ್ಯೆಯುಳ್ಳ ಎರಡನೇ ದೇಶವಾದ ಭಾರತವನ್ನು ನೂತನ ಶಿಕ್ಷಣ ನೀತಿ ಅನುಷ್ಠಾನದಿಂದ ಪ್ರಪಂಚದಲ್ಲಿಯೇ ಉತ್ತಮ ಶಿಕ್ಷಣ ನೀಡುವ ದೇಶವನ್ನಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಡಾ.ಕೆ. ಸಿದ್ದಪ್ಪ ಮಾತನಾಡುತ್ತಾ, ಯಾವುದೇ ಒಂದು ದೇಶದ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿದಲ್ಲಿ ಆ ದೇಶವನ್ನು ಸರ್ವನಾಶ ಮಾಡಬಹುದು ಎಂಬುದನ್ನು ಇತಿಹಾಸದ ಪುಟಗಳಲ್ಲಿ ನೋಡುತ್ತೇವೆ.
ಹಾಗೆಯೇ ಒಂದು ಸಮಾಜ ಹಾಗೂ ದೇಶದ ಅಭಿವೃದ್ಧಿಯಲ್ಲೂ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ. ಬದಲಾಗುತ್ತಿರುವ ಸನ್ನಿವೇಶ, ತಂತ್ರಜ್ಞಾನಗಳಿಗೆ ಅನುಗುಣವಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನೂತನ ಶಿಕ್ಷಣ ನೀತಿ ಸಹಕಾರಿಯಾಗಿದೆ ಎಂದರು.
ಭಾಷೆ ಬೆಳೆಯುತ್ತಾ ಸಾಗಿದಂತೆ ಗುರುಗಳಿಂದ ಕೇಳುತ್ತಿದ್ದ ಶಿಕ್ಷಣ ನಂತರ ಬರವಣಿಗೆ ರೂಪಕ್ಕೆ ತಾಳಿತು. 70ರ ದಶಕದಲ್ಲಿ ಕೆಲವೇ ಪುಸ್ತಕದ ಪ್ರತಿಗಳಿರುತ್ತಿದ್ದವು. ತಂತ್ರಜ್ಞಾನ ಬೆಳೆದಂತೆ ಮಾಹಿತಿ ಸಿಗುವ ಪ್ರಕಾರಗಳೂ ಹೆಚ್ಚುತ್ತಿವೆ. ಇ-ಬುಕ್‌ಗಳು ಲಭ್ಯವಿವೆ. ಗೂಗಲ್ ಗುರು ನಮ್ಮ ಕೈಯ್ಯಲ್ಲಿದ್ದಾನೆ.
ಇದರೊಂದಿಗೆ ಉನ್ನತ ಸಮಗ್ರತೆ ಮತ್ತು ನೈತಿಕ ಮೌಲ್ಯಗಳೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡುವ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರನ್ನು ತಯಾರಿಸಲು ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಪುನರ್‌ರಚಿಸುವ ಕೆಲಸವನ್ನು ನೂತನ ಶಿಕ್ಷಣ ನೀತಿ ಮಾಡುತ್ತಿದೆ ಎಂದರು.
ಕೊಠಡಿ ಒಳಗಷ್ಟೇ ಅಲ್ಲದೆ, ಅದರ ಹೊರತಾಗಿಯೂ ವಿದ್ಯಾರ್ಥಿಗಳು ಶಿಕ್ಷಕರ ಪಾಠ ಕೇಳುವಂತಹ ಕುತೂಹಲಕರ ವಾತಾವರಣ ಕಲ್ಪಿಸಬೇಕಾಗಿರವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕಿವಿ ಮಾತು ಹೇಳಿದರು.
ಬಿಐಇಟಿ ಕಾಲೇಜು ಪ್ರಾಂಶುಪಾಲ ಡಾ.ಹೆಚ್.ಬಿ. ಅರವಿಂದ್, ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಎಸ್.ಮಂಜಪ್ಪ, ಬಿಐಇಟಿ ಸಾರ್ವಜನಿಕ ಸಂಪರ್ಕ ಡೀನ್ ಡಾ.ಜಿ.ಪಿ. ದೇಸಾಯಿ ಇತರರು ಉಪಸ್ಥಿತರಿದ್ದರು.