ಸಿರಿಗೆರೆ, ಸೆ.21- ಭರಮ ಸಾಗರ ಕೆರೆಗೆ ತುಂಗಭದ್ರಾ ನದಿ ಯಿಂದ ನೀರನ್ನು ಪ್ರಾಯೋಗಿಕ ವಾಗಿ ಪಂಪ್ ಮಾಡಲಾಗಿದೆ. ಸೆ.23 ರೊಳಗೆ ಪೂರಾ 55 ಕಿಲೋ ಮೀಟರ್ ನೀರು ಹರಿಸುವ ಪ್ರಾಯೋಗಿಕ ಪ್ರಯತ್ನ ನಡೆಯಲಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ.
ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆ ಅವರು, ಈ ಭಾಗದ ಎಲ್ಲಾ ಎಂಜಿನಿಯರ್ ಗಳು ಮತ್ತು ಗುತ್ತಿಗೆದಾರರು ತಾಂತ್ರಿಕ ದೋಷಗಳನ್ನು ನಿವಾರಣೆ ಮಾಡುತ್ತಿದ್ದಾರೆ. ಎಲ್ಲಾ ಕಾರ್ಮಿಕರು ರಾತ್ರಿ-ಹಗಲು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ.
ತಜ್ಞರ ಪ್ರಕಾರ ಇಡೀ ರಾಜ್ಯದಲ್ಲಿ 55 ಕಿಲೋ ಮೀಟರ್ ದೂರದ ರೈಸಿಂಗ್ ಮೇನ್ ಇರುವುದು ಭರಮಸಾಗರ ಬಿಟ್ಟರೆ ಬೇರೆ ಎಲ್ಲೂ ಇಲ್ಲ. ಬೇರೆಡೆ ಇರುವ ರೈಸಿಂಗ್ ಮೇನ್ ಗರಿಷ್ಟ ದೂರ 25 ಕಿ.ಮೀ.ಗಿಂತ ಜಾಸ್ತಿ ಇಲ್ಲ.
ನಮ್ಮ ಸಂಕಲ್ಪದಂತೆ ಇದೇ 24 ರಂದು ಶುಕ್ರವಾರ ನಡೆಯಲಿರುವ ಹಿರಿಯ ಗುರುಗಳ ಶ್ರದ್ಧಾಂಜಲಿ ದಿನದಂದು ಬೆಳಗ್ಗೆ ಭರಮಸಾಗರ ಕೆರೆಗೆ ತುಂಗಭದ್ರೆಯ ನೀರು ಧುಮ್ಮಿಕ್ಕುವ ಪೂರ್ಣ ಆಶಾಭಾವನೆ ಇದೆ. ಲಿಂಗೈಕ್ಯ ಗುರುವರ್ಯರ ಈ ವರ್ಷದ ಶ್ರದ್ಧಾಂಜಲಿಯು ಈ ಭಾಗದ ಇತಿಹಾಸದಲ್ಲಿ ಚರಿತ್ರಾರ್ಹವಾಗಲಿದೆ. ದಶಕಗಳಿಂದ ಬಾಡಿದ ರೈತರ ಮುಖದಲ್ಲಿ ಶಾಶ್ವತವಾಗಿ ಮಂದಹಾಸ ಮೂಡಲಿದೆ ಎಂದು ಶ್ರೀಗಳು ಆಶಿಸಿದ್ದಾರೆ.