ದಾವಣಗೆರೆ, ಡಿ.9- ರಾಜ್ಯ ಸರ್ಕಾರ ಅಪ್ರಜಾತಾಂತ್ರಿಕ ಹಾಗೂ ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿರುವುದಾಗಿ ಆರೋಪಿಸಿ, ನಗರದಲ್ಲಿ ಇಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಷನ್ (ಎಐಡಿಎಸ್ಓ) ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು, ಎಐಡಿಎಸ್ಓ ಪದಾಧಿಕಾರಿಗಳು, ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕ ವರ್ಗ, ವಿದ್ಯಾರ್ಥಿಗಳ ವ್ಯಾಪಕ ವಿರೋಧದ ನಡುವೆಯೂ ಮುಂಬರುವ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತಿರುವ ಸರ್ಕಾರದ ಆತುರದ ಹೇರಿಕೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ ತರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈಗಾಗಲೇ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭಗೊಂಡಿದ್ದು, ಶೀಘ್ರದಲ್ಲೇ ಆಂತರಿಕ ಪರೀಕ್ಷೆಗಳು ನಡೆಯಲಿವೆ. ಆದರೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಇಲ್ಲದೇ ಹೇಗೆ ಪರೀಕ್ಷೆಗಳನ್ನು ಎದುರಿಸಬೇಕು. ಕಳೆದ 2 ತಿಂಗಳಿನಿಂದ ಯಾವುದೇ ರೀತಿಯ ಅಧ್ಯಾಯಗಳು ಯಾವ ವಿಭಾಗದಲ್ಲೂ ನಡೆದಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯ 4 ವರ್ಷದ ಪದವಿ ಕೋರ್ಸಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿಭಾಗದ ಮೂಲಕ ವಿಷಯದ ಜತೆ ಸಿಬಿಸಿಎಸ್ ಅಂದರೆ ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಂ ಅಡಿಯಲ್ಲಿ ಮತ್ತೊಂದು ವಿಭಾಗದ ವಿಷಯ ಓದುವ ಅನಿವಾರ್ಯತೆ ಇದೆ ಎಂದು ಆಕ್ಷೇಪಿಸಿದರು.
ಹೊಸ ನೀತಿಯಿಂದಾಗಿ ವಿಜ್ಞಾನ ಮೂಲ ವಿಷಯ ಇರುವ ವಿದ್ಯಾರ್ಥಿ ತನಗೆ ಸಂಬಂಧವೇ ಇರದ ವಾಣಿಜ್ಯ ಇಲ್ಲವೇ ಕಲಾ ವಿಭಾಗದ ಒಂದು ವಿಷಯ ಕಡ್ಡಾಯವಾಗಿ ಓದಲೇಬೇಕು. ಅದೇ ರೀತಿ ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದ ಒಂದು ವಿಷಯ ಓದಲೇಬೇಕೆಂಬ ಹೇರಿಕೆಯನ್ನು ಖಂಡಿಸುತ್ತೇವೆ. ಅಲ್ಲದೇ ಓದುವ, ಅಭ್ಯಸಿಸುವ ಪ್ರಕ್ರಿಯೆಯು ಆಯ್ಕೆಯ ಬದಲಾಗಿ ಹೇರಿಕೆಯಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಂ. ಕಿರಣ್, ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ಪುಷ್ಪಾ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.