ದಾವಣಗೆರೆ, ಸೆ.20 – ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಸತ್ಸಂಪ್ರದಾಯಕ್ಕೆ ಸರ್ಕಾರದ ಮಟ್ಟದಲ್ಲಿ ನಾಂದಿ ಹಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಭಿನಂದನೀಯರು. ಹಾರ, ಶಾಲು, ತುರಾಯಿಗಳ ಬದಲಾಗಿ ಪುಸ್ತಕದ ಉಡುಗೊರೆ ನೀಡಿ ಸತ್ಕರಿಸಿ ಎನ್ನುವ ಮುಖ್ಯಮಂತ್ರಿಗಳ ನಿಲುವು ಅವರಲ್ಲಿರುವ ಶ್ರೇಷ್ಠ ಸಂಸ್ಕಾರದ ಪ್ರತೀಕವಾಗಿದೆ.
ಮುಖ್ಯಮಂತ್ರಿಗಳ ಆಶಯಕ್ಕೆ ಅನುಗುಣವಾಗಿ ಮಹಾನಗರ ಪಾಲಿಕೆಯ ವತಿಯಿಂದ ನಿನ್ನೆ ನಗರದಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರುಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2020 ರ ಸಾಲಿನ `ಸಾಹಿತ್ಯಶ್ರೀ’ ಪ್ರಶಸ್ತಿ ಪುರಸ್ಕೃತರಾದ ಡಾ.ಮೃತ್ಯುಂಜಯ ರುಮಾಲೆಯವರು ರಚಿಸಿರುವ `ಕನ್ನಡ ಕವಿಗಳು ಕಂಡ ಭಾರತ’ ಎನ್ನುವ ಕವನಗಳ ಸಂಪಾದನಾ ಸಂಪುಟವನ್ನು ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು ಎಂದು ರಾಜ್ಯ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್.ಶಿವಯೋಗಿ ಸ್ವಾಮಿ ತಿಳಿಸಿದ್ದಾರೆ.
ಹೊಸಪೇಟೆಯ ಲೇಖಕ ಡಾ. ಮೃತ್ಯುಂಜಯ ರುಮಾಲೆ ಅವರ ’ಕನ್ನಡ ಕವಿಗಳು ಕಂಡ ಭಾರತ’ ಕೃತಿಯು ಕವನಗಳ ಸಂಪಾದನೆಯಾಗಿದೆ. ಈ ಕೃತಿಯು ಕಳೆದ ಶತಮಾನಗಳಲ್ಲಿ ಕನ್ನಡ ಕವಿಗಳು ಆಧುನಿಕತೆಯ ಪ್ರಭಾವ ಕಾರಣವಾಗಿ ರಾಷ್ಟ್ರೀಯತೆಯ ಮೇಲ್ಮೈಯಲ್ಲಿ ಕಂಡುಕೊಂಡ ಭಾರತವನ್ನು ಒಂದು ಕೇಂದ್ರ ಘಟಕವಾಗಿಸಿಕೊಂಡು ರಚಿಸಿದ ಕವಿತೆಗಳ ಸಂಪುಟವಾಗಿದೆ. ಇದು ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯುತ್ತಮ ಕೃತಿಯಾಗಿದೆ ಹಾಗೂ ಓದಲು, ಸಂಗ್ರಹಿಸಲು ಯೋಗ್ಯವಾಗಿದೆ ಎಂದು ಶಿವಯೋಗಿ ಸ್ವಾಮಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಸಚಿವ ಭೈರತಿ ಬಸವರಾಜ, ಶಾಸಕ ಎಸ್.ಎ.ರವೀಂದ್ರನಾಥ್, ಲೇಖಕ ಡಾ.ಮೃತ್ಯುಂಜಯ ರುಮಾಲೆ, ಮೇಯರ್ ಎಸ್.ಟಿ.ವೀರೇಶ್, ರಾಜ್ಯ ಬಿಜೆಪಿ ಶಿಕ್ಷಕರ ಪ್ರಕೋಷ್ಠದ ಸಹ ಸಂಚಾಲಕ ಕೆ.ಎಂ.ಸುರೇಶ್, ಮಹಾ ನಗರ ಪಾಲಿಕೆ ಸದಸ್ಯರಾದ ಕೆ.ಎಂ.ವೀರೇಶ್, ಪ್ರಸನ್ನ ಕುಮಾರ್, ಡಿ.ದಿಳ್ಯೆಪ್ಪ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.