ಕೆರೆ ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿ: ವೀಣಾ

ಹರಪನಹಳ್ಳಿ, ಸೆ.20- ಕರೆಕಾನಹಳ್ಳಿ ಗ್ರಾಮದ ಕೆರೆಯನ್ನು ಕೆರೆಯಾಗಿ ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ ಮಹಾಂತೇಶ್‌ ಚರಂತಿಮಠ ತಹಶೀಲ್ದಾರ್‍ಗೆ ಮನವಿ ಪತ್ರ ಸಲ್ಲಿಸಿದರು.

ಕರೆಕಾನಹಳ್ಳಿ ಗ್ರಾಮದ ಕೆರೆಯಿಂದ ಹರಪನಹಳ್ಳಿ ತಾಲ್ಲೂಕು ಕಛೇರಿಯ ವರೆಗೆ §ಕೆರೆಯನ್ನು ಕೆರೆಯಾಗಿ ಉಳಿಸಿ¬ ಎಂದು ಹಮ್ಮಿಕೊಂಡಿದ್ದ  ಎರಡು ದಿನದ ಪಾದಯಾತ್ರೆಯೊಂದಿಗೆ ಪಟ್ಟಣದ ಮಿನಿ ವಿಧಾನಸೌಧಕ್ಕೆ ಆಗಮಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಐತಿಹಾಸಿಕ ಹಿನ್ನೆಲೆ ಇರುವ ಕರೆಕಾನಹಳ್ಳಿ ಕೆರೆ ಪ್ರಕೃತಿ ಸೌಂದರ್ಯಕ್ಕೆ ಸಾಕ್ಷಿಯಾಗಿದ್ದು, ಕೆರೆ ನಾಶದಿಂದ ಅಂತರ್ಜಲ ಕೃಷಿ ಚಟುವಟಿಕೆ, ಜನ ಜಾನುವಾರು, ಪಶುಪಕ್ಷಿಗಳಿಗೆ ಜೀವ ಸಂಕುಲಕ್ಕೆ  ತೊಂದರೆಯಾಗುತ್ತಿದೆ. ಕೆರೆಯನ್ನು ನಿರ್ಮಿಸಲು ಆಗದವರಿಂದ ಕೆರೆಯನ್ನು  ಮಾರಾಟ ಮಾಡುವ ಹಕ್ಕಿಲ್ಲ. ಒತ್ತುವರಿದಾರರು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದು ಖಂಡನೀಯ. ಹಾಗಾಗಿ ಶಾಸಕರು ಸರ್ಕಾರದಿಂದಲೇ ಭೂಮಾಲೀಕರಿಂದ ಭೂಮಿ ಖರೀದಿಸಿ, ಕೆರೆಯನ್ನು ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಲು ಮುಂದಾಗಬೇಕು ಎಂದರು. 

ಕೆಪಿಸಿಸಿ ಕಾನೂನು ಘಟಕದ ಜಿಲ್ಲಾ ಉಪಾಧ್ಯಕ್ಷ, ವಕೀಲ ದುಗ್ಗಾವತಿ ಸಿದ್ದಲಿಂಗನಗೌಡ ಮಾತನಾಡಿ,  ತಾಲ್ಲೂಕಿನಲ್ಲಿ ಸುಮಾರು 6.5 ಸಾವಿರ ಎಕರೆ ಸರ್ಕಾರಿ ಭೂಮಿ ಇದ್ದು ನಿರಂತರವಾಗಿ ಸರ್ಕಾರಿ ಭೂಮಿಯನ್ನು ಕಬಳಿಸುವ ಕೆಲಸ ಜರುಗುತ್ತಿದ್ದರೂ ಕೂಡ ತಾಲ್ಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ. ಮಾಡ್ಲಗೇರಿ ಕಂದಾಯ ಗ್ರಾಮದ ಕರೆಕಾನಹಳ್ಳಿ ಕೆರೆ ಸ.ನಂ. 1/27 ರಲ್ಲಿ 15.75 ಎಕರೆ ಭೂಮಿ  ಚಂದ್ರನಾಯ್ಕರ ಹೆಸರಿನಲ್ಲಿ ಖಾತೆ ಬದಲಾವಣೆಯಾಗಿದ್ದು, ಸರ್ಕಾರ ಎಚ್ಚೆತ್ತು  ಕೆರೆ ಉಳಿಸಬೇಕು. ಕೆರೆ ಒತ್ತುವರಿ ಬಗ್ಗೆ ದಾಖಲೆ ಸಮೇತ ಅಧಿಕಾರಿಗಳಿಗೆ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಒದಗಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿ ಕೊಳ್ಳುವುದಾಗಿ ಎಚ್ಚರಿಸಿದರು. 

ಕಾರ್ಮಿಕ ಸಂಘಟನೆ ಮುಖಂಡ ಹೊಸಹಳ್ಳಿ ಮಲ್ಲೇಶ್ ಮಾತನಾಡಿ ಭೂಗಳ್ಳರಿಂದ ಕೆರೆಯನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕೇ ಹೊರತು ಸರ್ಕಾವೇ ಹಿಂಬಾಗಿಲಿನಿಂದ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯ ಉಪಾಧ್ಯಕ್ಷ ಡಾ.ಮಹಾಂತೇಶ್ ಚರಂತಿಮಠ, ಧರ್ಮನಾಯ್ಕ, ಮಂಜುನಾಥ ಪೂಜಾರ, ಚಂದ್ರಪ್ಪ, ಎಂ.ಹನುಮಂತಪ್ಪ, ಸಕ್ರನಾಯ್ಕ, ಲಾಲೂನಾಯ್ಕ, ಗ್ರಾ.ಪಂ. ಸದಸ್ಯರಾದ ನಾಗರಾಜ, ಊಮ್ಲಿಬಾಯಿ, ಗಾಯತ್ರಮ್ಮ, ಎ.ಡಿ. ದ್ವಾರಕೇಶ, ಬಸವರಾಜ, ಲಾಲ್ಯಾ ನಾಯ್ಕ್, ಕಸಾಂಜಿ ನಾಯ್ಕ್, ಅಂಜಿನಪ್ಪ, ಪ್ರಕಾಶ್ ನಾಯ್ಕ್, ಚಂದ್ರಪ್ಪ, ಹನುಮಂತಪ್ಪ, ಗುರುರಾಜ್ ಸೇರಿದಂತೆ ಕರೆಕಾನಹಳ್ಳಿ ಗ್ರಾಮಸ್ಥರು, ಮುಖಂಡರು ಉಪಸ್ಥಿತರಿದ್ದರು.

error: Content is protected !!