ಸಿರಿಗೆರೆಯಲ್ಲಿನ ಬರಡು ರಾಸು ಚಿಕಿತ್ಸಾ ಶಿಬಿರದ ಉದ್ಘಾಟನೆಯಲ್ಲಿ ತರಳಬಾಳು ಜಗದ್ಗುರುಗಳು
ಸಿರಿಗೆರೆ, ಸೆ.20 – ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ (ಚಿತ್ರದುರ್ಗ) ಹಾಗೂ ಪಶು ಚಿಕಿತ್ಸಾಲಯ (ಸಿರಿಗೆರೆ) ಇವರ ವತಿಯಿಂದ ತರಳಬಾಳು ಬೃಹನ್ಮಠದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಸ್ಮರಣೆ ಅಂಗವಾಗಿ ಬರಡು ರಾಸು ಚಿಕಿತ್ಸಾ ಶಿಬಿರ ಹಾಗೂ ಮಿಶ್ರತಳಿ ಹಸು ಹಾಗೂ ಕರುಗಳ ಪ್ರದರ್ಶನಕ್ಕೆ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿದರು.
ಗೋವುಗಳು ಮೂಕ ಪ್ರಾಣಿಗಳು. ನಾವು ಕೇವಲ ಅವುಗಳಿಂದ ಪ್ರಯೋಜನ ಪಡೆಯು ವುದು ಅಷ್ಟೇ ಅಲ್ಲ, ಅವುಗಳನ್ನು ಆರೈಕೆ ಮಾಡು ವುದೂ ನಮ್ಮೆಲ್ಲರ ಹೊಣೆಗಾರಿಕೆ ಎಂದು ತರಳಬಾಳು ಜಗದ್ಗುರುಗಳು ತಿಳಿಸಿದರು.
ಮನುಷ್ಯ ಬಹಳ ಸ್ವಾರ್ಥಿ ಎಂದ ಶ್ರೀಗಳು, ನಮ್ಮ ಗೋ ಶಾಲೆಗಳಲ್ಲಿ ವಯಸ್ಸಾದಂತಹ ಹಸುಗಳಿಂದ ಪ್ರಯೋಜನ ಪಡೆದು, ಉಪಯೋಗ ಇಲ್ಲ ಎನ್ನುವ ಸಂದರ್ಭದಲ್ಲಿ ಗೋಶಾಲೆಗೆ ತಂದು ಬಿಡುತ್ತಾರೆ. ನಂತರ ಅವುಗಳ ಕ್ಷೇಮವನ್ನು ವಿಚಾರಿಸಲು ಯಾರೂ ಬರುವುದಿಲ್ಲ, ಕೆಲವು ಜನರು ದನ-ಕರುಗಳನ್ನು ಅಷ್ಟೇ ಅಲ್ಲದೆ ವಯಸ್ಸಾದ ತಂದೆ, ತಾಯಿಗಳನ್ನು ಸಹ ಮನೆಯಿಂದ ಹೊರಗೆ ಕಳಿಸುವ ಪರಿಸ್ಥಿತಿ ಇಂದು ಬಂದು ಬಿಟ್ಟಿದೆ. ಹಸುಗಳನ್ನು ಉಪಯೋಗ ಮಾಡಿಕೊಂಡು ಅವುಗಳು ನಿರುಪಯುಕ್ತ ಆದ ನಂತರ ಅವುಗಳನ್ನು ತಿರಸ್ಕರಿಸುವುದು ಜನರಲ್ಲಿ ಕೃತಜ್ಞತಾ ಭಾವ ಇಲ್ಲದಂತಾಗಿದೆ ಎಂದು ಜಗದ್ಗುರುಗಳು ವ್ಯಾಕುಲತೆ ವ್ಯಕ್ತಪಡಿಸಿದರು.
ದನಗಳ ಜಾತ್ರೆಯ ಬಯಕೆ: ಸಿರಿಗೆರೆಯ ಶಾಂತಿವನದ ಗೋಶಾಲೆಯಲ್ಲಿ ವಿಶಾಲವಾಗಿ ಇರುವ ಜಾಗದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ದನ ಕರುಗಳಿಗೂ ತರಳಬಾಳು ಬೃಹನ್ಮಠದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು, ಜೊತೆಗೆ ದನಗಳ ಜಾತ್ರೆಯೇ ಆಗಬೇಕೆಂಬುದು ತಮ್ಮ ಬಯಕೆಯಾಗಿದೆ ಎಂದು ತಿಳಿಸಿದರು.
ಗೋವು ಜಗತ್ತಿನ ಮಾತೆ, ಗೋವುಗಳು ದೈವ ಸ್ವರೂಪ, ಗೋವಿನ ಮುಖದಲ್ಲಿ ಬ್ರಹ್ಮನನ್ನು, ಕಣ್ಣುಗಳಲ್ಲಿ ವಿಷ್ಣುವನ್ನು, ಕಂಠದಲ್ಲಿ ರುದ್ರನನ್ನು, ಕಣ್ಣುಗಳಲ್ಲಿ ಸೂರ್ಯ ಚಂದ್ರರನ್ನು ಹೊಂದಿದ ದೇಶ ನಮ್ಮದು ಎಂದು ತಿಳಿಸಿ, ಸ್ವಾತಂತ್ರ್ಯಪೂರ್ವದ ನಮ್ಮ ದೇಶದಲ್ಲಿ 73 ತಳಿಗಳಿದ್ದು, ಇಂದು ಕೇವಲ 33 ತಳಿಗಳು ಉಳಿದುಕೊಂಡಿವೆ. ನಮ್ಮ ಇಲಾಖೆಯಿಂದ ಗೋಶಾಲೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು.
-ಡಾ. ಪ್ರಸನ್ನಕುಮಾರ್, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಚಿತ್ರದುರ್ಗ
24ಕ್ಕೆ ಭರಮಸಾಗರ ಕೆರೆಗೆ ನೀರು: ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ಮಲ್ಲಿಕಾರ್ಜುನ ಗುಂಗಿ ಹಾಗೂ ಅಧಿಕಾರಿಗಳ ಹತ್ತಿರ ಮಾತನಾಡಿ, ಹಿರಿಯ ಗುರುಗಳ ಶ್ರದ್ಧಾಂಜಲಿ ದಿನದಂದೇ ಶುಕ್ರವಾರ ಭರಮಸಾಗರ ಕೆರೆಗೆ ನೀರು ಬರುವಂತೆ ಮಾಡಿದರೆ ಚರಿತ್ರಾರ್ಹ ಘಟನೆಯಾಗುತ್ತದೆ, ಲಿಂಗೈಕ್ಯ ಶಿವಕುಮಾರ ಗುರುಗಳಿಗೆ ಭರಮಸಾಗರ ಕೆರೆಗೆ ನೀರು ಹರಿಸುವುದರ ಮೂಲಕ ಶ್ರದ್ಧಾಂಜಲಿ ಸಾರ್ಥಕವಾಗುತ್ತದೆ ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.
ಬಿ.ಕಲಪನಹಳ್ಳಿ ತೆರವಾದ ಮನೆಗಳಿಗೆ ರಾಜೀ ಹಾಗೂ ಸಂಧಾನಗಳ ಮೂಲಕ ಸೂಕ್ತ ಪರಿಹಾರ ನೀಡಲಾಗಿದೆ. ಜೊತೆಗೆ, ಆನಗೋಡು ಭಾಗದಲ್ಲಿ 5 ಅಥವಾ 6 ಪೈಪುಗಳ ಜೋಡಣೆ ಕಾರ್ಯ ಪ್ರಗತಿಯಲ್ಲಿದ್ದು, ಇನ್ನು ಮುಖ್ಯವಾಗಿ ವಿದ್ಯುಚ್ಛಕ್ತಿ ಸಮಸ್ಯೆಯು ಬಗೆಹರಿದಿದ್ದು, ಒಟ್ಟಾರೆ ಎಲ್ಲಾ ಅಡೆತಡೆಗಳನ್ನು ಮೀರಿ ಭರಮಸಾಗರ ಕೆರೆಗೆ ನೀರು ಬರುವ ದಾರಿ ಸುಗಮವಾಗಿದೆ, ಇದೇ ದಿನಾಂಕ 24ರ ಶುಕ್ರವಾರ ಭರಮಸಾಗರ ದಲ್ಲಿ ಹಿರಿಯ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಡಾ. ಎನ್. ಕುಮಾರ್, ಸಹಾಯಕ ನಿರ್ದೇಶಕರು ಚಿತ್ರದುರ್ಗ, ಡಾ. ಶಂಕರಪ್ಪ ನಿವೃತ್ತ ಸಹಾಯಕ ನಿರ್ದೇಶಕರು, ಡಾ. ಕಲ್ಲಪ್ಪ, ಡಾ. ಸಿ ತಿಪ್ಪೇಸ್ವಾಮಿ, ಯೋಗೇಶ್, ಅಧ್ಯಕ್ಷರು ಹಾಲು ಉತ್ಪಾದಕರ ಸಂಘ ಸಿರಿಗೆರೆ, ಡಾ. ಜಿ. ಸಿ. ಸತೀಶ್ ಕುಮಾರ್, ಪಶುವೈದ್ಯಾಧಿಕಾರಿಗಳು ಸಿರಿಗೆರೆ, ಡಾ.ಶಶಿಧರ್, ಹಿರಿಯ ಪಶುವೈದ್ಯಾಧಿಕಾರಿಗಳು ಅಳಗವಾಡಿ, ಡಾ. ವಿ.ಟಿ. ಮುರುಗೇಶ್, ಪಶು ವೈದ್ಯಾಧಿಕಾರಿಗಳು ಭೀಮಸಮುದ್ರ, ಡಾ. ಮರಳಸಿದ್ದಯ್ಯ, ಮೋಹನ್ ಕೆ.ಎನ್.ಬಿ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರಾದ ಎಂ. ಜಿ. ದೇವರಾಜ್, ನಾಗರಾಜ್ ವಿ, ಶ್ರೀಧರ್, ಸಿಎಚ್ ಶೋಭಾ ನಾಗರಾಜ್, ಹಾಲಮ್ಮ, ಪಿಡಿಒ ಲೋಕೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.