ಜಿಲ್ಲೆಯ ಹತ್ತು ಸಾವಿರ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಬಂದರೂ ದಾಖಲಾತಿ ಸಾಧ್ಯವಾಗದೇ ಅತಂತ್ರ
ದಾವಣಗೆರೆ, ಸೆ. 26 – ಆರರಿಂದ ಹತ್ತನೇ ತರಗತಿಯವರೆಗಿನ ಶಾಲೆಗಳು ಕಳೆದ ತಿಂಗಳು ಆಗಸ್ಟ್ 23 ಹಾಗೂ ಸೆಪ್ಟೆಂಬರ್ 6ರಿಂದ ಎರಡು ಹಂತಗಳಲ್ಲಿ ಆರಂಭಗೊಂಡಿದ್ದರೂ, ಕೆಲ ತೊಡಕುಗಳು ಇನ್ನೂ ಬಗೆಹರಿಯದೇ ಹತ್ತು ಸಾವಿರ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.
ಕೊರೊನಾ ಸಾಂಕ್ರಾಮಿಕದಿಂದ ಶಿಕ್ಷಣದಲ್ಲಿ ಎರಡು ವರ್ಷಗಳಿಂದ ಅನಿಶ್ಚಿತತೆ ಉಂಟಾಗಿದೆ. ಆರ್ಥಿಕ ಒತ್ತಡ ಸೇರಿದಂತೆ, ಹಲವಾರು ಕಾರಣಗಳಿಂದ ಪೋಷಕರು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಆದರೆ, ಸಾಕಷ್ಟು ಪೋಷಕರು ಹಳೆಯ ಶುಲ್ಕ ಪಾವತಿ ಮಾಡದೇ ಇರುವ ಕಾರಣ, ಖಾಸಗಿ ಶಾಲೆಗಳು ವರ್ಗಾವಣೆ ಪತ್ರ ಕೊಡಲು ನಿರಾಕರಿಸುತ್ತಿವೆ.
ಈ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರಲು ಬಯಸಿದರೂ ದಾಖಲಾತಿ ಸಾಧ್ಯವಾಗುತ್ತಿಲ್ಲ. ಹೆಸರಿರುವು ದು ಖಾಸಗಿ ಶಾಲೆಯಲ್ಲಿ, ಪಾಠ ಕಲಿಯುತ್ತಿರುವುದು ಸರ್ಕಾರಿ ಶಾಲೆಯಲ್ಲಿ ಎಂಬ ಅತಂತ್ರದಲ್ಲಿ ಈ ವಿದ್ಯಾರ್ಥಿಗಳಿದ್ದಾರೆ. ಸೆಪ್ಟೆಂಬರ್ ಮುಗಿದು ಅಕ್ಟೋಬರ್ ಸಮೀಪಿಸಿದರೂ ಈ ಗೊಂದಲ ಬಗೆಹರಿಯುತ್ತಿಲ್ಲ.
ಹೈಕೋರ್ಟ್ ಕಳೆದ ವರ್ಷ ಖಾಸಗಿ ಶಾಲೆಗಳ ಶುಲ್ಕದಲ್ಲಿ ಶೇ.30ರ ವಿನಾಯಿತಿ ನೀಡಿತ್ತು ಹಾಗೂ ಈ ವರ್ಷ ಶೇ.15ರ ವಿನಾಯಿತಿ ನೀಡಿದೆ. ಇಷ್ಟಾದರೂ, ಪೋಷಕರು ಶುಲ್ಕ ಪಾವತಿಸದ ಕಾರಣ ಮಕ್ಕಳ ಟಿ.ಸಿ. ಪಡೆಯಲು ಸಾಧ್ಯವಾಗಿಲ್ಲ. ಇಂತಹ ಮಕ್ಕಳ ಸಂಖ್ಯೆ ಸುಮಾರು 10 ಸಾವಿರದಷ್ಟಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ನನ್ನ ಮಗ ಎಷ್ಟನೇ ತರಗತಿ?
ಎರಡು ವರ್ಷ ಕಲಿಕೆ ಸ್ತಬ್ಧವಾದ ನಂತರ ಶಾಲೆ ಪುನರಾರಂಭವಾದಾಗ ಪೋಷಕರೊಬ್ಬರು ಬಂದು, ನನ್ನ ಮಗ ಈಗ ಎಷ್ಟನೇ ತರಗತಿ ಎಂದು ನಮ್ಮನ್ನೇ ಕೇಳಿದರು ಎಂದು ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಹೇಳಿದ್ದಾರೆ.
ಒಬ್ಬ ವಿದ್ಯಾರ್ಥಿಯ ಹೆಸರು ರಾಜ್ಯ ಸರ್ಕಾರದ ಶಿಕ್ಷಣ ಸಾಫ್ಟ್ವೇರ್ ಆದ ಸ್ಯಾಟ್ಸ್ನಿಂದ ಬಿಟ್ಟು ಹೋಗಿತ್ತು. ಹೀಗಾಗಿ ಎರಡು ವರ್ಷ ಕಳೆದರೂ ಆತ ಹಳೆಯ ತರಗತಿಯಲ್ಲೇ ಇದ್ದಾನೆ.
ಇನ್ನೊಬ್ಬ ವಿದ್ಯಾರ್ಥಿ ಶಾಲೆಗೆ ಬರದೇ ಇದ್ದರೂ, ಪಾಠ ಕಲಿಯದೇ ಇದ್ದರೂ ಸ್ಯಾಟ್ಸ್ನಲ್ಲಿ ಹೆಸರಿದ್ದ ಕಾರಣ ಎರಡು ವರ್ಷ ತೇರ್ಗಡೆಯಾಗಿದ್ದಾನೆ. ಆತ ಎಲ್ಲಿದ್ದಾನೆ ಎಂಬುದೇ ನಮಗೆ ಗೊತ್ತಿಲ್ಲ, ಹುಡುಕಲು ಹೋದರೂ ಸಿಕ್ಕಿಲ್ಲ ಎಂದು ಮುಖ್ಯೋಪಾಧ್ಯಾಯರು ಶಿಕ್ಷಣ ವಲಯದಲ್ಲಿ ಆಗಿರುವ ದುಸ್ಥಿತಿಯ ಚಿತ್ರಣ ತೆರೆದಿಟ್ಟಿದ್ದಾರೆ.
ಕಡ್ಡಾಯ ಪಾಸ್ನಿಂದ ವಿದ್ಯಾರ್ಥಿಗಳಿಗೆ ಸಂಕಷ್ಟ
ಆನ್ಲೈನ್ ಕಲಿಕೆ ಕೈಗೆಟುಕದ ಮಕ್ಕಳು ಅತಂತ್ರ
ಕೊರೊನಾ ಸಮಯದಲ್ಲಿ ಸರ್ಕಾರ ಹಾಗೂ ಖಾಸಗಿಯವರು ಟಿ.ವಿ. ಹಾಗೂ ಆನ್ಲೈನ್ ಮೂಲಕ ಪಾಠಕ್ಕೆ ವ್ಯವಸ್ಥೆ ಮಾಡಿದ್ದರು. ಟಿ.ವಿ., ಅರೆಬರೆಯ ಶಾಲಾರಂಭದಿಂದಲೇ ಮಕ್ಕಳು ಕಲಿತಿದ್ದಾರೆ ಎಂದು ಭಾವಿಸಿರುವ ಸರ್ಕಾರ, ಮಕ್ಕಳನ್ನು ಎರಡು ತರಗತಿ ದಾಟುವಂತೆ ಮಾಡಿದೆ.
ಆದರೆ, ಸಾಕಷ್ಟು ಮಕ್ಕಳಿಗೆ ಆನ್ಲೈನ್ ಪಾಠ ದಕ್ಕಿಲ್ಲ. ಕೆಲವರಂತೂ ಕಲಿತ ಪಾಠವನ್ನೆಲ್ಲಾ ಸಂಪೂರ್ಣ ಮರೆತಿದ್ದಾರೆ. ಇವರು ಸರ್ಕಾರಿ ಲೆಕ್ಕದಲ್ಲಿ ಪಾಸ್ ಆಗಿದ್ದರೆ, ಕಲಿಕೆಯಲ್ಲಿ ಫೇಲ್ ಆಗಿದ್ದಾರೆ. ಆಗಿದ್ದು ಆಗಲಿ, ಇನ್ನೊಂದು ವರ್ಷ ಹಳೆ ತರಗತಿಯಲ್ಲೇ ಕಲಿಯುತ್ತೇನೆ ಎಂದರೆ ಸರ್ಕಾರ ಅದಕ್ಕೆ ಕೊಕ್ಕೆ ಹಾಕಿದೆ!
ಕಡ್ಡಾಯ ಪಾಸ್ ಇರುವುದರಿಂದ ಹಳೆಯ ತರಗತಿಯ ಪುನರಾವರ್ತನೆ ಸಾಧ್ಯವಿಲ್ಲದಂತಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಎಲ್ಲ ಸರಿಯಾಗಿದ್ದಾಗಲೇ ಸಾಕಷ್ಟು ಮಕ್ಕಳಿಗೆ ವಿಜ್ಞಾನ ಹಾಗೂ ಗಣಿತ ಕಬ್ಬಿಣದ ಕಡಲೆಯಾಗಿದ್ದವು. ಒಂದೆಡೆ ಎರಡು ವರ್ಷ ಪಾಠ ಸರಿಯಾಗಿ ನಡೆದಿಲ್ಲ, ಈಗ ಇನ್ನೂ ಉನ್ನತ ಹಂತದ ಕಲಿಕೆಗೆ ಮಕ್ಕಳನ್ನು ದೂಡಿರುವುದು ವಿವೇಚನಾ ರಹಿತ ಕ್ರಮವಾಗಿದೆ. ವರ್ಷದ ಕಡ್ಡಾಯ ಪಾಸ್, ಮಕ್ಕಳನ್ನು ಜೀವನವಿಡೀ ಕಲಿಕೆಯಿಂದ ಫೇಲ್ ಆಗುವಂತೆ ಮಾಡುವ ಅಪಾಯ ತಂದಿದೆ ಎಂಬ ಕಳವಳ ಈಗ ಮೂಡುತ್ತಿದೆ.
ಖಾಸಗಿ ಬಿಟ್ಟು ಸರ್ಕಾರಿ ಶಾಲೆಗಳಿಗೆ ಬಂದ ಈ ಮಕ್ಕಳು ಅಧಿಕೃತವಾಗಿ ಶಾಲೆಗೆ ಸೇರ್ಪಡೆಯಾಗಲು ಸಾಧ್ಯವಾಗಿಲ್ಲ. ಈ ಮಕ್ಕಳಿಗೆ ಶಿಕ್ಷಣ ನಿರಾಕರಿಸದೇ ಪಾಠ ಮಾಡಲಾಗುತ್ತಿದೆ. ಆದರೆ, ದಾಖಲಾತಿ ವಿಷಯದಲ್ಲಿ ಶಾಲೆಗಳು ಅಸಹಾಯಕವಾಗಿವೆ. ಪ್ರತಿನಿತ್ಯ ಈ ಪೋಷಕರು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರ್ಕಾರಿ ಶಾಲೆಗಳಿಗೆ ಬಂದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಆದರೆ, ದಾಖಲಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.85ರಷ್ಟು ದಾಖಲಾತಿ ಮಾತ್ರ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ವರದಿಗಳ ಪ್ರಕಾರ ಜಿಲ್ಲೆಯಲ್ಲಿನ 495 ಪ್ರೌಢಶಾಲೆಗಳಿಗೆ 77,214 ಮಕ್ಕಳು ದಾಖಲಾಗಿದ್ದಾರೆ. 1,100 ಪ್ರಾಥಮಿಕ ಶಾಲೆಗಳಿಗೆ 53,318 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಈ ಪೈಕಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 24,346, ಅನುದಾನಿತ ಶಾಲೆಗಳಲ್ಲಿ 7,645, ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿ 19,570 ಮತ್ತು ಸಮಾಜ ಕಲ್ಯಾಣ ಇಲಾಖೆ ಮತ್ತಿತರೆ ಶಾಲೆಗಳಲ್ಲಿ 1,757 ಮಕ್ಕಳಿದ್ದಾರೆ.
ಸರ್ಕಾರಿ ಪ್ರೌಢಶಾಲೆಗಳಲ್ಲಿ 25,611, ಅನುದಾನಿತ ಪ್ರೌಢಶಾಲೆಗಳಲ್ಲಿ 24,470, ಅನುದಾನ ರಹಿತ ಪ್ರೌಢಶಾಲೆಗಳಲ್ಲಿ 22,390 ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತಿತರೆ ಶಾಲೆಗಳಲ್ಲಿ 4,743 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಈ ಸಮಸ್ಯೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಉತ್ತಮವಾಗಿದೆ. ಶಾಲಾರಂಭದ ನಂತರ ಕೊರೊನಾದಿಂದ ಯಾವುದೇ ತೊಡಕು ಎದುರಾಗಿಲ್ಲ. ಮಕ್ಕಳ ದಾಖಲಾತಿಗೆ ಇನ್ನೂ ಸಮಯ ಇದೆ. ದಾಖಲಾತಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಕೆಲವೇ ಖಾಸಗಿ ಶಾಲೆಗಳನ್ನು ಹೊರತು ಪಡಿಸಿದರೆ, ಉಳಿದೆಲ್ಲ ಶಾಲೆಗಳಲ್ಲಿ 6ರಿಂದ ಹತ್ತನೇ ತರಗತಿಗೆ ನೇರ ಪಾಠಗಳು ನಡೆಯುತ್ತಿವೆ. ಪೋಷಕರು ಹಾಗೂ ಮಕ್ಕಳು ಉತ್ಸಾಹದಿಂದ ಶಾಲೆಗೆ ಬರುತ್ತಿದ್ದಾರೆ. ಮಕ್ಕಳು ಪೂರ್ಣ ಪ್ರಮಾಣದಲ್ಲಿ ಶಾಲೆಗಳಿಗೆ ಬರುತ್ತಿದ್ದಾರಾದರೂ, ಖಾಸಗಿ ಶಾಲೆಗಳಿಂದ ವರ್ಗಾವಣೆ ಪತ್ರ ಇನ್ನೂ ಸಿಗದ ಕಾರಣ ಒಟ್ಟು ದಾಖಲಾತಿ ಅಂಕಿ-ಅಂಶದಲ್ಲಿ ಕೊರತೆ ಇದೆ ಎಂದು ಹೇಳಿದ್ದಾರೆ.
– ಎಸ್.ಎ. ಶ್ರೀನಿವಾಸ್,
[email protected]